ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆ ತೆರವುಗೊಳಿಸದಂತೆ ಸಚಿವರು ಸೂಚಿಸಿದ್ದರೂ ಅರಣ್ಯಾಧಿಕರಿಗಳು ಬೆಳ್ಳಂಬೆಳಗ್ಗೆ ತೆರವಿಗೆ ಮುಂದಾದ ಘಟನೆ ಆ.9ರ ಸೋಮವಾರ ನಡೆದಿದೆ.
ಬೆಳ್ಳಂಬೆಳಗ್ಗೆ ಶಾಸಕ ಹರೀಶ್ ಪೂಂಜ ಸ್ಥಳಕ್ಕೆ ದೌಡಾಯಿಸಿದ್ದು, ಅವರೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಂಗಳೂರು ಉತ್ತರ ಕ್ಷೇತ್ರ ಶಾಸಕ ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಸಾಥ್ ನೀಡಿದರು.
ಸ್ಥಳದಲ್ಲಿ ನೂರಾರು ಪೊಲೀಸರು, ಸ್ಥಳೀಯರು, ಅರಣ್ಯ ಇಲಾಖೆ ಸಿಬಂದಿ ಜಮಾಯಿಸಿ ತಾತ್ಕಾಲಿಕವಾಗಿ ನಿರ್ಮಿಸಿದ ಮನೆ ತೆರವಿಗೆ ಅರಣ್ಯ ಇಲಾಖೆ ಮುಂದಾಗಿದ್ದಾರೆ. ಇದನ್ನು ತಡೆದ ಎಂಎಲ್ ಸಿ ಪ್ರತಾಪಸಿಂಹ ನಾಯಕ್ ಅವರನ್ನು ಲೆಕ್ಕಿಸದೆ ಎಸಿಎಫ್ ಸುಬ್ಬಯ್ಯ ನಾಯ್ಕ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೆರವುಗೊಳಿಸಲು ಮುಂದಾದ ಘಟನೆ ನಡೆಯಿತು.
ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು.
ಕಳೆದ ಅ.6 ರಂದು ಅರಣ್ಯ ಇಲಾಖೆ ನೂತನ ಮನೆ ನಿರ್ಮಾಣಕ್ಕೆ ಮುಂದಾದ ಕುಟುಂಬದ ಫೌಂಡೇಶನ್ ಕಿತ್ತೆಸೆದ ಅರಣ್ಯ ಇಲಾಖೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಮನೆ ಮಂದಿ ಹಾಗೂ ಸ್ಥಳೀಯರು ಸೇರಿ 10 ಮಂದಿ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅರಣ್ಯ ಇಲಾಖೆ ದೂರು ದಾಖಲಿಸಿತ್ತು.
ಪ್ರಕರಣವು ರಾಜಕೀಯ ಬಣ್ಣ ಪಡೆಯುತ್ತಿದ್ದು, ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದು ಅರಣ್ಯಧಿಕಾರಿಗಳು ಮನೆ ತೆರವುಗೊಳಿಸಿಯೇ ಸಿದ್ಧ ಎಂದು ಹಟಕ್ಕೆ ಬಿದ್ದಿದೆ. ತೆರವುಗೊಳಿಸುವುದಾದರೆ ಅರಣ್ಯ ಮತ್ತು ಕಂದಾಯ ಜಂಟಿ ಸರ್ವೇ ನಡೆಸಿ ತೆರವುಗೊಳಿಸಿ ಎಂದು ಶಾಸಕರು ಆಗ್ರಹಿಸಿದ್ದಾರೆ.