ಬೆಳ್ತಂಗಡಿ: ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯ ಫೌಂಡೇಶನ್ ಅರಣ್ಯ ಇಲಾಖೆ ಕಿತ್ತೆಸೆದ ಘಟನೆಗೆ ಸಂಬಂಧಿಸಿದಂತೆ ಜಿಲ್ಲೆಯ ಶಾಸಕರು ದೌಡಾಯಿಸುತ್ತಲೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದ ಪ್ರಕರಣ ತಾತ್ಕಾಲಿಕ ಸುಖಾಂತ್ಯ ಕಂಡಿದೆ.
ಸ್ಥಳಕ್ಕೆ ಜಿಲ್ಲಾ ಅರಣ್ಯಾಧಿಕಾರಿ ವೆಲಂಟನಿ ಮರಿಯಪ್ಪ ಅವರು ಭೇಟಿ ನೀಡಿ ಮನೆ ತೆರವುಗೊಳಿಸುವುದಾಗಿ ತಿಳಿಸಿದಾಗ, ಶಾಸಕರುಗಳು ತೆರವುಗೊಳಿಸುವುದಾದರೆ 309 ಸರ್ವೇ ನಂಬರ್ ಗೆ ಒಳಪಟ್ಟ ಎಲ್ಲ ಮನೆ ತೆರವುಗೊಳಿಸಿ, ಇಲ್ಲವೇ ಕಂದಾಯ, ಅರಣ್ಯ ಜಂಟಿ ಸರ್ವೇ ನಡೆಸಿ ಎಲ್ಲರಿಗೂ ಹಕ್ಕುಪತ್ರ ನೀಡಿ. ಬಡವರಿಗೊಂದು ನ್ಯಾಯ ಸಿರಿವಂತರಿಗೊಂದು ನ್ಯಾಯ ಬೇಡ ಎಂದು ಊರವರು ಜತೆಗೂಡಿ ಪಟ್ಟು ಹಿಡಿದರು.
ಬಳಿಕ ವಿಚಾರ ಗಂಭೀರ ಸ್ವರೂಪ ಪಡೆಯುತ್ತಲೆ, ಡಿಎಫ್ಒ, ಎಸಿಎಫ್, ಆರ್.ಎಫ್.ಒ ಘಟನೆ ಕುರಿತು ವಿಶ್ಲೇಷಿಸಿ, ಜಿಲ್ಲಾಧಿಕಾರಿಯವರಲ್ಲಿ ಮಾತುಕತೆ ನಡೆಸಿ, ತಹಶೀಲ್ದಾರ್ ಅವರ ಸಲಹೆ ಪಡೆದರು. ಬಳಿಕ ಆಗಮಿಸಿದ ಡಿಎಫ್ಒ ಮನೆಮಂದಿ ಹಾಗೂ ಶಾಸಕರಲ್ಲಿ ಮಾತುಕತೆ ನಡೆಸಿ, 309 ಸರ್ವೇ ನಂಬರ್ ಗೆ ಒಳಪಟ್ಟಂತೆ ಸುಮಾರು 6000 ಕ್ಕೂ ಅಧಿಕ ಎಕ್ರೆ ಭೂಮಿಯಿದೆ. ಅರಣ್ಯ ಹಾಗೂ ಕಂದಾಯ ಜಂಟಿ ಸರ್ವೇ ನಡೆಸಿದ ಬಳಿಕ ಮನೆ ತೆರವಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.
ಮಾತ್ರವಲ್ಲದೆ ಸದ್ಯ ಮನೆ ಯಥಾಸ್ಥಿತಿಯಲ್ಲಿ ಇರಿಸಬೇಕು, ಜಂಟಿ ಸರ್ವೇ ನಡೆಸುವವರೆಗೆ ಮನೆ ಮರು ನಿರ್ಮಾಣಕ್ಕೆ ಸಂಬಂಧಿಸಿ ಯಾವುದೇ ಕಾಮಗಾರಿ ನಡೆಸುವುದಿಲ್ಲ, ಒಂದು ವೇಳೆ ಮನೆ ಪ್ರದೇಶ ಅರಣ್ಯ ಎಂದಾದಲ್ಲಿ ತಾವೇ ನಿಂತು ತೆರವುಗೊಳಿಸುವುದಾಗಿ ಶಾಸಕ ಹರೀಶ್ ಪೂಂಜ ಅವರಿಂದ ಡಿಎಫ್ಒ ಅವರು ಲಿಖಿತ ಹೇಳಿಕೆ ಬರೆಸಿಕೊಂಡರು. ಅಲ್ಲಿಗೆ ಪ್ರಕರಣ ಒಂದು ಹಂತಕ್ಕೆ ತಾತ್ಕಾಲಿಕ ಅಂತ್ಯ ಸಿಕ್ಕಂತಾಗಿದೆ. ಮುಂದೆ ಸರ್ವೇ ಕಾರ್ಯ ನಡೆಸಿ ಈ ನಿರ್ಧಾರಕ್ಕೆ ಬರಲಾಗುವುದು ಎಂದು ಡಿಎಫ್ಒ ಭರವಸೆ ನೀಡಿದರು.