ಬೈಂದೂರು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ್ ಬಾಬು ಪೂಜಾರಿ ಬಳಿ ಕೋಟ್ಯಾಂತರ ಹಣವನ್ನು ತೆಗೆದುಕೊಂಡು ವಂಚಿಸಿದ ಚೈತ್ರಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ವಿಚಾರಣೆಗೆ ಹಾಜರಾಗುವಂತೆ ವಜ್ರದೇಹಿ ಸ್ವಾಮೀಜಿಗೆ ಬೆಂಗಳೂರು ಸಿಸಿಬಿ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಹೌದು, ಮಂಗಳೂರಿನ ಗುರುಪುರದಲ್ಲಿರುವ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಸ್ವಾಮೀಜಿ ವಿಚಾರಣೆಗೆ ಹಾಜರಾಗಲಿದ್ದಾರೆ.
ಇನ್ನು ವಂಚನೆ ಪ್ರಕರಣದ ಆರೋಪಿಯಾದ ಚೈತ್ರಾ, ಆತನ ವಿರುದ್ಧವೇ ಜಾರಿ ನಿರ್ದೇಶಾನಲಯಕ್ಕೆ ಪತ್ರ ಬರೆಯಲಾಗಿತ್ತು. ಜೊತೆಗೆ ಪತ್ರದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಜ್ರದೇಹಿ ಮಠದ ಸ್ವಾಮೀಜಿ ಹೆಸರನ್ನು ಸಹ ಚೈತ್ರಾ ಪ್ರಸ್ತಾಪ ಮಾಡಿದ್ದರು. ಬಳಿಕ ಈ ಕುರಿತು ಮಾತನಾಡಿದ್ದ ಸ್ವಾಮೀಜಿ, ‘ಚೈತ್ರಾ ನನಗೆ ಫೋನ್ ಮಾಡಿ ನಿಮ್ಮ ಮೇಲೆ ದೂರು ಇದೆ ಎಂದಿದ್ದರು. ನಿಮಗೆ ಗೋವಿಂದಬಾಬು ಪೂಜಾರಿ 1.50 ಕೋಟಿ ರೂ. ಹಣ ನೀಡಿದ್ದಾರಂತೆ. ಹಣ ವಾಪಸ್ ನೀಡಿ ಎಂದು ಚೈತ್ರಾ ಕುಂದಾಪುರ ನನಗೆ ಹೇಳಿದ್ದರು. ಆಗ ಚೈತ್ರಾ ಕುಂದಾಪುರ ಹೇಳಿಕೆಯನ್ನು ನಾನು ಖಂಡಿಸಿದ್ದೆ. ಚೈತ್ರಾ ಕುಂದಾಪುರ ಸುಳ್ಳು ಆರೋಪದ ಬಗ್ಗೆ ನಾನು ಆಕ್ರೋಶಗೊಂಡಿದ್ದೆ ಎಂದು ಹೇಳಿದ್ದರು.
ನನಗೂ, ಪ್ರಕರಣಕ್ಕೂ ಸಂಬಂಧವಿಲ್ಲ ಎಂದಿದ್ದ ಸ್ವಾಮೀಜಿ
ಇನ್ನು ಇದೇ ವೇಳೆ ‘ನನಗೂ, ಆಕೆಯ ಪ್ರಕರಣಕ್ಕೂ ಸಂಬಂಧ ಇಲ್ಲ. ಜುಲೈ ತಿಂಗಳಲ್ಲಿ ಹಿಂದೂ ಸಂಘಟನೆಯ ಸತ್ಯಜಿತ್ ಸುರತ್ಕಲ್ ಫೋನ್ ಮಾಡಿದ್ದರು. ಗೋವಿಂದ ಪೂಜಾರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ವಂಚಿಸಿರುವ ಬಗ್ಗೆ ನನಗೆ ಪ್ರಶ್ನೆ ಮಾಡಿದ್ದರು. ಆದರೆ, ನನಗೇನೂ ತಿಳಿದಿರಲಿಲ್ಲ, ನನ್ನಲ್ಲಿ ಯಾಕೆ ಪ್ರಶ್ನೆ ಮಾಡುವುದೆಂದು ಕೇಳಿದ್ದೆ. ಬಳಿಕ ಅವರೇ ಫೋನ್ ಮಾಡಿ, ಚೈತ್ರಾ ಮತ್ತು ಅಭಿನವ ಹಾಲಶ್ರೀ ಹೆಸರಿದೆ ಎಂದಿದ್ದರು. ಹಾಲಶ್ರೀ ಯುವ ಬ್ರಿಗೇಡ್ ಜೊತೆ ಗುರುತಿಸಿಕೊಂಡಿದ್ದರು. ಹೀಗಾಗಿ ಚಕ್ರವರ್ತಿ ಸೂಲಿಬೆಲೆ ಹೆಸರು ತಳುಕು ಹಾಕಿಕೊಳ್ಳುವ ಸಂಶಯ ಬಂತು. ಆ ಸಂದರ್ಭದಲ್ಲಿ ಅವರಿಗೆ ಫೋನ್ ಮಾಡಿದ್ದೆ ಎಂದಿದ್ದರು.
ಗಗನ್ ಕಡೂರು ಹೆಸರು ಬಂದಾಗ ಸಿಟಿ ರವಿ ಗಮನಕ್ಕೆ ತರಲಾಗಿತ್ತು. ಅವರಲ್ಲಿ ಕೂಲಕುಂಶವಾಗಿ ಮಾತಾಡಿ ಸುಮ್ಮನೆ ಬಿಡಬೇಡಿ ಎಂದಿದ್ದೆ. ಚೈತ್ರಾ ಕುಂದಾಪುರ ಜೊತೆ ಒಡನಾಟ ಇದೆಯಾ ಎಂದು ಸೂಲಿಬೆಲೆ ಕೇಳಿದ್ದರು. ಚೈತ್ರಾ ಕುಂದಾಪುರ ಬರೆದ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದೆ. ಹೀಗಾಗಿ ಅವರು ಸಂಪರ್ಕ ಇದೆ ಎಂದು ಹೇಳಿದ್ದೆ. ಹಾಗಿದ್ದರೆ ಚೈತ್ರಾ ಕುಂದಾಪುರ ಜೊತೆಯೂ ಒಮ್ಮೆ ಮಾತನಾಡಿ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದರು ಎಂದು ಹೇಳಿದ್ದರು. ಇದೀಗ ಸಿಸಿಬಿ ಪೊಲೀಸರು ಸ್ವಾಮೀಜಿಗೆ ನೋಟಿಸ್ ನೀಡಿದ್ದಾರೆ.