ಇಂದು ವಿಶ್ವ ಮಾನಸಿಕ ಆರೋಗ್ಯ ದಿನ

ಶೇರ್ ಮಾಡಿ

ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಹಾಗೆಯೇ ಮಾನಸಿಕ ಆರೋಗ್ಯ ಕೂಡ ಮುಖ್ಯ. ದೈಹಿಕವಾಗಿ ಆರೋಗ್ಯವಾಗಿದ್ದರೂ ಮನಸ್ಸು ದುರ್ಬಲವಾಗಿದ್ದರೆ ಅನೇಕ ಕಾಯಿಲೆಗಳು ಬರುವ ಸಾಧ್ಯತೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಾನಸಿಕ ಆರೋಗ್ಯವೆಂದರೆ ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಪೂರ್ಣವಾಗಿ ಸ್ವಸ್ಥವಾಗಿರುವುದು.

ಜಗತ್ತಿನಾದ್ಯಂತ ಇಂದು ಲಕ್ಷಾಂತರ ಜನ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇಂದು ಪ್ರಪಂಚದಲ್ಲಿ ಅನೇಕ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಕೋವಿಡ್ ಬಳಿಕ ಜನರಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತದೆ.

ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಮೊದಲ ಬಾರಿಗೆ ಅಕ್ಟೋಬರ್ 10, 1992 ರಂದು ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ ಆಯೋಜಿಸಿತು. ಇದು 150 ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ತಿತ್ವವನ್ನು ಹೊಂದಿರುವ ಜಾಗತಿಕ ಮಾನಸಿಕ ಆರೋಗ್ಯ ಸಂಸ್ಥೆಯಾಗಿದೆ. ಈ ಉಪಕ್ರಮವನ್ನು 1992 ರಲ್ಲಿ ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್‌ನ ಡೆಪ್ಯುಟಿ ಸೆಕ್ರೆಟರಿ ಜನರಲ್ ರಿಚರ್ಡ್ ಹಂಟರ್ ಪ್ರಸ್ತಾಪಿಸಿದರು.

1994 ರವರೆಗೆ ಯಾವುದೇ ನಿರ್ದಿಷ್ಟ ಥೀಮ್ ಇಲ್ಲದೆ ದಿನವನ್ನು ಆಚರಿಸಲಾಯಿತು; ಇದು ಮುಖ್ಯವಾಗಿ ಮಾನಸಿಕ ಆರೋಗ್ಯದ ಸಾಮಾನ್ಯ ಸಮಸ್ಯೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದರ ಮೇಲೆ ಕೇಂದ್ರೀಕೃತವಾಗಿತ್ತು. ನಂತರ 1994 ರಲ್ಲಿ, ಯುಜೀನ್ ಬ್ರಾಡಿ ಸಲಹೆಗಳ ಆಧಾರದ ಮೇಲೆ, ಮಾನಸಿಕ ಆರೋಗ್ಯಕ್ಕಾಗಿ ವಿಶ್ವ ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ದಿನವನ್ನು ಥೀಮ್ ಆಧರಿಸಿ ಆಚರಿಸಲಾಯಿತು ಮತ್ತು 1994 ರ ಥೀಮ್ “ವಿಶ್ವದಾದ್ಯಂತ ಮಾನಸಿಕ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಸುಧಾರಿಸುವುದು”. ಅಲ್ಲಿಂದೀಚೆಗೆ, ಮಾನಸಿಕ ಆರೋಗ್ಯ ಸಮಸ್ಯೆಗಳು, ಅದರ ತಡೆಗಟ್ಟುವಿಕೆ ಮತ್ತು ಮಾನಸಿಕ ಪೀಡಿತ ಜನರಿಗೆ ಉತ್ತಮ ಅವಕಾಶವನ್ನು ಸೃಷ್ಟಿಸುವ ಬೆಂಬಲಗಳ ಬಗ್ಗೆ ಜನರಿಗೆ ಉತ್ತೇಜಿಸಲು ಮತ್ತು ಶಿಕ್ಷಣ ನೀಡಲು ಮಾನಸಿಕ ಆರೋಗ್ಯಕ್ಕಾಗಿ ವಿಶ್ವ ಒಕ್ಕೂಟವು ನಿರ್ದಿಷ್ಟ ಥೀಮ್ ಅನ್ನು ಘೋಷಿಸಿದೆ.2023 ರ ಥೀಮ್” ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು”.

ಮಾನಸಿಕ ಆರೋಗ್ಯ ಹದಗೆಡಲು ಹಲವಾರು ಕಾರಣಗಳಿವೆ.
ನಿದ್ರಾಹೀನತೆ, ಆತಂಕ, ಒತ್ತಡ, ಸಣ್ಣ ವಯಸ್ಸಿನಲ್ಲಿ ಮನಸ್ಸಿಗಾದ ಗಾಯ, ಮನೆಯ ವಾತಾವರಣ, ಕೀಳರಿಮೆ, ಗರ್ಭಿಣಿ ಮತ್ತು ಬಾಣಂತನದ ಸಮಯದಲ್ಲಿ ಮನಸ್ಸಿನ ಮೇಲೆ ಬೀಳುವ ಪರಿಣಾಮ ಹೀಗೆ ಇನ್ನು ಹಲವು ಕಾರಣಗಳು ಇವೆ.

ಮಾನಸಿಕ ಸಮಸ್ಯೆ ಗೊತ್ತಾದಾಗ ಹೆಚ್ಚಿನವರು ಅದು ಯಾವುದೋ ಭೂತದ ಕಾಟ ಎಂದೇ ಭಾವಿಸುತ್ತಾರೆ. ರೋಗಿಗಳ ವರ್ತನೆ ಬದಲಾದಾಗ ಮೊದಲು ಮನೋ ವೈದ್ಯರನ್ನು ಕಾಣುವುದು ಒಳಿತು. ಕೆಲವರು ಮನೋವೈದ್ಯರನ್ನು ಕಾಣುವುದು ಅವಮಾನ ಎಂಬಂತೆ ತಿಳಿಯುತ್ತಾರೆ. ಖಂಡಿತಾವಾಗಿ ಇದು ಅವಮಾನ ಅಲ್ಲ. ಮನೋರೋಗಿಗಳು ಅಂದ ಕೂಡಲೆ ನಿಮಗೆ ಹುಚ್ಚು ಹಿಡಿದಿದೆ ಎಂದು ಭಾವಿಸಬೇಕಾಗಿಲ್ಲ. ಸೂಕ್ತ ಆಪ್ತ ಸಮಾಲೋಚನೆ ಮೂಲಕ, ಕೆಲವು ಔಷಧೀಗಳ ಮೂಲಕ ಮನೋರೋಗವನ್ನು ಗುಣಪಡಿಸಬಹುದು.

ಮನಸ್ಸನ್ನು ಸದಾ ಸಂತೋಷವಾಗಿ ಇಟ್ಟುಕೊಂಡರೆ ಮನೋರೋಗದಿಂದ ದೂರವಿರಬಹುದು. ಒಳ್ಳೆಯ ಸುಮಧುರ ಸಂಗೀತ ಕೇಳುವುದು, ಒಳ್ಳೆಯ ಪುಸ್ತಕಗಳನ್ನು ಓದುವುದು, ಬೇರೆ ಬೇರೆ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು, ಏಕಾಂಗಿಯಾಗಿರದೆ ಇತರರ ಜೊತೆ ಬೆರೆಯುವುದು, ಗಿಡಗಳನ್ನು ಬೆಳೆಸುವುದು, ಯೋಗ ಮತ್ತು ಧ್ಯಾನ ಮುಂತಾದ ಚಟುವಟಿಕೆಗಳಿಂದ ಮನಸ್ಸಿನ ಆರೋಗ್ಯ ಉತ್ತಮ ಪಡಿಸಬಹುದಾಗಿದೆ.

✍🏻 ನ್ಯಾನ್ಸಿ ನೆಲ್ಯಾಡಿ
ಶಿಕ್ಷಕಿ ಹಾಗೂ ಪ್ರತಿಲಿಪಿ ಸಾಹಿತಿ

Leave a Reply

error: Content is protected !!