ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ಶೇರ್ ಮಾಡಿ

ಬೆಳ್ತಂಗಡಿ ತಾಲೂಕಿನಲ್ಲಿ ಹಲವು ದಿನಗಳಿಂದ ಧಾರಾಕಾರ ಮಳೆಯಾಗಿದ್ದು ನೆರಿಯ ಗ್ರಾಮದ ಅಣಿಯೂರು ಕೋಲೋಡಿ ಮತ್ತು ಪುಲ್ಲಾಜೆ, ಕೋಲ್ನ ಎಂಬ ಪ್ರದೇಶದಲ್ಲಿ ಸೇತುವೆ ನಿರ್ಮಾಣ ಆಗದೇ ನೂರಾರು ಕುಟುಂಬಗಳು ಮಳೆ ವೇಳೆ ತೀವ್ರ ಸಮಸ್ಯೆ ಎದುರಿಸುತ್ತಿವೆ.

ಅ.11ರಂದು ಪುಲ್ಲಾಜೆ ಯುವಕ ಬೈಕಿನಲ್ಲಿ ಹೊಳೆ ದಾಟುತ್ತಿರುವ ವೇಳೆಯಲ್ಲಿ ನೀರಿನಲ್ಲಿ ಸಿಲುಕಿಕೊಂಡು ಕೊಚ್ಚಿಕೊಂಡು ಹೋಗುವ ಪರಿಸ್ಥಿತಿಯಲ್ಲಿದ್ದು ಇದನ್ನು ತಿಳಿದ ಸ್ಥಳೀಯರು ಯುವಕನನ್ನು ಅಪಾಯದಿಂದ ಪಾರು ಮಾಡಿದ್ದರು.
ಇದನ್ನು ತಿಳಿದ ಸ್ಥಳೀಯರು ತಕ್ಷಣ ಪಂಚಾಯಿತಿ ಅಧ್ಯಕ್ಷೆ ವಸಂತಿಯವರಿಗೆ ಸೇತುವೆ ನಿರ್ಮಿಸಲು ಮನವಿ ಮಾಡಿದ್ದರು. ಇದಕ್ಕೆ ಅಧ್ಯಕ್ಷೆ ಸರಿಯಾದ ಸ್ಪಂದನೆ ನೀಡಿಲ್ಲ ಎಂಬ ಕಾರಣಕ್ಕೆ ಅ.12 ರಂದು ಸಂಜೆ ಪಂಚಾಯಿತಿ ಮುಂಭಾಗ ಊರಿನವರು, ಏಕಾಏಕಿ ಪ್ರತಿಭಟನೆ ನಡೆಸಿ ತಕ್ಷಣ ಸೇತುವೆ ನಿರ್ಮಿಸುವ ಬಗ್ಗೆ ಪಂಚಾಯತಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯು ರಾತ್ರಿ 8 ಗಂಟೆವರೆಗೂ ಮುಂದುವರಿದು, ಸ್ಥಳಕ್ಕೆ ಧರ್ಮಸ್ಥಳದ ಪೊಲೀಸ್ ಠಾಣೆಯ ಪಿ ಎಸ್ ಐ ಅನಿಲ್ ಕುಮಾರ್ ಹಾಗೂ ಸಿಬ್ಬಂದಿ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ ಬಳಿಕ ಪ್ರತಿಭಟನೆ ಕೊನೆಗೊಂಡಿತು.

ವೈಯಕ್ತಿಕ ಕೆಲಸದ ಹಿನ್ನೆಲೆಯಲ್ಲಿ ಗುರುವಾರ ಗ್ರಾಮದಿಂದ ಹೊರಗಡೆ ಇದ್ದ ವೇಳೆ ದೂರವಾಣಿ ಕರೆ ಬಂದಿದ್ದು, ಈ ಬಗ್ಗೆ ಹಿಂದಿರುಗಿ ಬಂದ ಬಳಿಕ ಮಾತನಾಡುವುದಾಗಿ ತಿಳಿಸಿದ್ದೆ. ಕೆಲವರು ಅದಾಗಲೇ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಧರ್ಮಸ್ಥಳ ಪೊಲೀಸರು ಆಗಮಿಸಿ ಮಾತುಕತೆ ನಡೆಸಿದ ಬಳಿಕ ಪ್ರತಿಭಟನೆ ಹಿಂದೆಗೆದು ಕೊಳ್ಳಲಾಯಿತು.ಸದ್ಯ ಸೇತುವೆ ನಿರ್ಮಾಣವಾಗಬೇಕಾದ ಸ್ಥಳದಲ್ಲಿ ಚರಲ್ ಹಾಕಿ ಪಂಚಾಯಿತಿ ವತಿಯಿಂದ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಲಾಗುವುದು. ಜಿಲ್ಲಾ ಪಂಚಾಯತಿ ಇಂಜಿನಿಯರ್ ಅವರನ್ನು ಕರೆಯಿಸಿ ಇಲ್ಲಿ ಸೇತುವೆ ನಿರ್ಮಾಣಕ್ಕೆ ತಗಲಬಹುದಾದ ಅಂದಾಜು ವೆಚ್ಚದ ಕುರಿತು ಪರಿಶೀಲಿಸಿ, ಇದು ಪಂಚಾಯಿತಿಯ ಸೀಮಿತ ಅನುದಾನದಲ್ಲಿ ನಿರ್ಮಿಸುವ ಹಾಗಿದ್ದಲ್ಲಿ ಪಂಚಾಯಿತಿ ವತಿಯಿಂದ ಸೇತುವೆ ನಿರ್ಮಿಸಲಾಗುವುದು. ಹೆಚ್ಚಿನ ಅನುದಾನದ ಅಗತ್ಯವಿದ್ದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕಿನ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಸೇತುವೆ ನಿರ್ಮಿಸಿ ಕೊಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ ತಿಳಿಸಿದ್ದಾರೆ.

ವಿವಾದ ಮುಗಿಯದ ಪಂಚಾಯಿತಿ
ನೆರಿಯ ಗ್ರಾಮ ಪಂಚಾಯಿತಿ ಒಂದಲ್ಲ ಒಂದು ವಿವಾದಗಳಿಂದ ಸದಾ ಸುದ್ದಿಯಲ್ಲಿರುವ ಪಂಚಾಯಿತಿಯಾಗಿದೆ. ಕಳೆದ ಜುಲೈ 15ರಂದು ಈ ಗ್ರಾಮದಲ್ಲಿ ರುದ್ರ ಭೂಮಿ ಇಲ್ಲದೆ ಸ್ಥಳೀಯರೊಬ್ಬರ ಶವವನ್ನು ವಿಲೇವಾರಿ ಮಾಡಲು ಜಾಗವಿಲ್ಲದ ಕಾರಣ ಪಂಚಾಯಿತಿಯಲ್ಲಿ ಊರವರಿಂದ ಪ್ರತಿಭಟನೆ ನಡೆದಿತ್ತು. ಈ ಬಗ್ಗೆ ಸಾಕಷ್ಟು ವಾದ ವಿವಾದಗಳು ನಡೆದಿದ್ದವು. ಪಂಚಾಯಿತಿ ರುದ್ರ ಭೂಮಿಗೆ ಗುರುತಿಸಿದ ಜಾಗಕ್ಕೆ ಶವವನ್ನು ಕೊಂಡೊಯ್ಯಲು ಹಲವಾರು ಅಡ್ಡಿಗಳು ಬಂದ ಕಾರಣ ಇಲ್ಲಿ ಯಾವುದೇ ಅಗತ್ಯ ಸೌಕರ್ಯಗಳು ಇಲ್ಲದಿರುವುದರಿಂದ ತಹಸೀಲ್ದಾರ್ ನೇತೃತ್ವದಲ್ಲಿ ಪಂಚಾಯಿತಿಯ ಸಮೀಪವೇ ತಾತ್ಕಾಲಿಕ ರುದ್ರ ಭೂಮಿಯನ್ನು ಗುರುತಿಸಿ, ಬಳಿಕ ಶವ ದಹನ ಮಾಡಲಾಯಿತು.

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಇಲ್ಲಿನ ಪಂಚಾಯಿತಿ ಅಧ್ಯಕ್ಷೆ ಮಾಜಿ ಉಪಾಧ್ಯಕ್ಷೆ ಹಾಗೂ ಸದಸ್ಯರೊಬ್ಬರನ್ನು ಭಾರತೀಯ ಜನತಾ ಪಕ್ಷದಿಂದ ಕಳೆದ ವಾರವಷ್ಟೆ ಅಮಾನತುಗೊಳಿಸಲಾಗಿದೆ. ಈಗ ಸೇತುವೆ ನಿರ್ಮಾಣ ವಿಚಾರದಲ್ಲಿ ಪ್ರತಿಭಟನೆ ನಡೆದಿದ್ದು, ನೆರಿಯ ಗ್ರಾಮ ಪಂಚಾಯಿತಿಯಲ್ಲಿ ಸಮಸ್ಯೆಗಳು ಮುಗಿಯದ ಗೋಳಾಗಿದೆ.

Leave a Reply

error: Content is protected !!