ಕ್ರೆಡಿಟ್ ಸ್ಕೋರ್ ಎಂಬುದು ನಿಮ್ಮ ಹಣಕಾಸು ಸಾಮರ್ಥ್ಯ ಮತ್ತು ಹಣಕಾಸು ಶಿಸ್ತಿಗೆ ಕನ್ನಡಿಯಾಗಿರುತ್ತದೆ. ಕ್ರೆಡಿಟ್ ಕಾರ್ಡ್ ಬಿಲ್ ಅನ್ನಾಗಲೀ, ಸಾಲದ ಕಂತುಗಳನ್ನಾಗಲೀ ಸರಿಯಾಗಿ ಕಟ್ಟದೇ ಹೋದಾಗ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತದೆ. ಕಡಿಮೆ ಕ್ರೆಡಿಟ್ ಸ್ಕೋರ್ ಇದ್ದರೆ ಸಾಲ ಸಿಗುವುದು ಕಷ್ಟ. ಆದ್ದರಿಂದ ಸಾಲದ ವಿಚಾರ ಬಂದರೆ ಅದನ್ನು ಸರಿಯಾದ ಸಮಯಕ್ಕೆ ತೀರಿಸುವುದು ಜಾಣತನ ಎನಿಸುತ್ತದೆ. ಕೆಲ ಸಂದರ್ಭದಲ್ಲಿ ಅನಿರೀಕ್ಷಿತ ಹಣಕಾಸು ಬಿಕ್ಕಟ್ಟು ಉದ್ಭವಿಸಿಯೋ, ಅಥವಾ ಅನಾರೋಗ್ಯದಿಂದಲೋ ಅಥವಾ ಮತ್ಯಾವುದಾದರೂ ಸಕಾರಣಗಳಿಂದಲೋ ಸಾಲದ ಕಂತು ಕಟ್ಟಲು ಸಾಧ್ಯವಾಗದೇ ಹೋಗಬಹುದು. ಆಗ ಬ್ಯಾಂಕ್ನಿಂದ ನೋಟೀಸ್ ಬರುತ್ತದೆ, ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಆಗಬಹುದು. ಇಂಥ ಸಂದರ್ಭದಲ್ಲಿ ನೀವು ಏನು ಕ್ರಮ ಕೈಗೊಳ್ಳಬಹುದು? ಏನಿವೆ ಆಯ್ಕೆಗಳು?
ಬ್ಯಾಂಕ್ ಸಂಪರ್ಕಿಸಿ ನಿಮ್ಮ ಪರಿಸ್ಥಿತಿ ವಿವರಿಸಿ…
ಸಾಧ್ಯವಾದಷ್ಟೂ ಬೇಗ ಬ್ಯಾಂಕಿಗೆ ದೌಡಾಯಿಸಿ ಅಲ್ಲಿನ ಮ್ಯಾನೇಜರ್ ಜೊತೆ ನಿಮ್ಮ ಸ್ಥಿತಿ ವಿವರಿಸಿ. ಇದರಿಂದ ನಿಮ್ಮ ಮೇಲೆ ವಿಶ್ವಾಸ ಮೂಡುತ್ತದೆ. ನೀವು ಕಟ್ಟದೇ ಉಳಿಸಿಕೊಂಡಿರುವ ಬಾಕಿ ಹಣವನ್ನು ಪಾವತಿಸಲು ಆಯ್ಕೆಗಳನ್ನು ಕೇಳಿ ನೋಡಿ.
ಕೆಲ ತಿಂಗಳು ನಿಮಗೆ ಕಂತುಗಳನ್ನು ಕಟ್ಟಲು ಸಾಧ್ಯವಾಗುತ್ತಿಲ್ಲದಿದ್ದರೆ, ಅಷ್ಟು ಅವಧಿ ವಿನಾಯಿತಿ ನೀಡಲು ನಿವೇದಿಸಿಕೊಳ್ಳಿ. ನೀವು ಪ್ರಾಮಾಣಿಕರಿದ್ದೀರಿ ಎಂದು ಬ್ಯಾಂಕ್ಗೆ ಅನಿಸಿದರೆ ಸಾಲ ಮರುಪಾವತಿ ಪುನಾರಚನೆಗೆ ಒಪ್ಪಿಗೆ ಸಿಗಬಹುದು.
ಬ್ಯಾಂಕ್ನ ನಿಬಂಧನೆಗಳನ್ನು ಓದಿ ತಿಳಿದುಕೊಳ್ಳಿ
ಸಾಲ ತೀರಿಸಲು ವಿಫಲವಾದರೆ ಬ್ಯಾಂಕ್ ವತಿಯಿಂದ ಏನೇನು ಕ್ರಮ ಕೈಗೊಳ್ಳಬಹುದು ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಲೋನ್ ಅಗ್ರೀಮೆಂಟ್ ವೇಳೆ ಇದನ್ನು ನಮೂದಿಸಲಾಗಿರುತ್ತದೆ.
ಕೆಲ ಬ್ಯಾಂಕುಗಳು ಗ್ರೇಸ್ ಪೀರಿಯಡ್ ನೀಡುತ್ತವೆ. ಸಾಲದ ಕಂತು ಕಟ್ಟಬೇಕಿರುವ ದಿನದಿಂದ ಮೇಲ್ಪಟ್ಟು ಇಂತಿಷ್ಟು ಅವಧಿಯವರೆಗೆ ಗ್ರೇಸ್ ಪೀರಿಯಡ್ ಇರಬಹುದು.
ಲೋನ್ ಇನ್ಷೂರೆನ್ಸ್ ನಿಯಮಗಳನ್ನು ಪರಿಶೀಲಿಸಿ…
ಈಗ ಸಾಮಾನ್ಯವಾಗಿ ದೊಡ್ಡ ಸಾಲ ಕೊಡುವಾಗ ಬ್ಯಾಂಕುಗಳು ಲೋನ್ ಇನ್ಷೂರೆನ್ಸ್ ಕೂಡ ನೀಡುತ್ತವೆ. ಇದರ ಹಣವನ್ನು ಸಾಲದಿಂದಲೇ ಮುರಿದುಕೊಳ್ಳಲಾಗುತ್ತದೆ. ಈ ಲೋನ್ ಇನ್ಷೂರೆನ್ಸ್ನಲ್ಲಿ ಇಎಂಐ ಕಂತು ಕಟ್ಟುವುದು ತಪ್ಪಿರುವುದೂ ಕೂಡ ಒಳಗೊಳ್ಳಲಾಗಿದೆಯಾ ಪರಿಶೀಲಿಸಿ. ಉದ್ಯೋಗನಷ್ಟ, ಅನಾರೋಗ್ಯ ಇತ್ಯಾದಿ ಕಾರಣಕ್ಕೆ ಸಾಲ ಕಟ್ಟಲಾಗದಿದ್ದರೆ ಇನ್ಷೂರೆನ್ಸ್ ಕವರೇಜ್ ಇದ್ದಿರಬಹುದು. ಹಾಗೇನಾದರೂ ಆ ಸೌಲಭ್ಯ ಇದ್ದಲ್ಲಿ ನೀವು ದಂಡದ ಮೊತ್ತವನ್ನು ಕ್ಲೈಮ್ ಮಾಡಬಹುದು.
ಕ್ರೆಡಿಟ್ ಸ್ಕೋರ್ ಕಡಿಮೆ ಮಾಡದಂತೆ ಮನವಿ ಮಾಡಿ…
ನೀವು ಬ್ಯಾಂಕ್ ಸಾಲ ಸರಿಯಾದ ಸಮಯಕ್ಕೆ ಕಟ್ಟಲು ವಿಫಲವಾದರೆ ಬ್ಯಾಂಕ್ ಜೊತೆ ಮಾತನಾಡಿ ಲೋನ್ ರೀಸ್ಟ್ರಕ್ಚರಿಂಗ್ ಮಾಡಿಸಿಕೊಳ್ಳಿ. ಕ್ರೆಡಿಟ್ ಸ್ಕೋರ್ ಕಡಿಮೆ ಮಾಡಲಾಗಿದ್ದರೆ, ಆ ಬಗ್ಗೆಯೂ ಮಾತನಾಡಿ ಸ್ಕೋರ್ ಹೆಚ್ಚಿಸಲು ಕೇಳಿಕೊಳ್ಳಿ.
ಅದೇ ವೇಳೆ ಹಣಕಾಸು ಕಷ್ಟದಿಂದ ಸಾಲ ಕಟ್ಟಲು ಆಗದೇ ಇದ್ದಲ್ಲಿ, ಒಂದಷ್ಟು ದಿನ ವಿನಾಯಿತಿ ಅವಧಿ ಪಡೆಯಿರಿ. ಅಷ್ಟರಲ್ಲಿ ನಿಮ್ಮ ಹಣಕಾಸು ಸಮಸ್ಯೆಗೆ ಪರಿಹಾರ ಹುಡುಕಲು ತಜ್ಞರೊಂದಿಗೆ ಸಮಾಲೋಚಿಸಿ.