ಮಂತ್ರವಾದಿಯೊಬ್ಬ ಕೊಟ್ಟ ನಾಟಿ ಔಷಧಿ ಸೇವಿಸಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ ನಲ್ಲಗುಟ್ಟಪಾಳ್ಯ ಗ್ರಾಮದಲ್ಲಿ ನಡೆದಿದೆ. ಅಲ್ಲದೇ ಔಷಧಿ ಸೇವಿಸಿದ ಬಾಲಕನ ತಂದೆ ಹಾಗೂ ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದ ಶಶಿಕಲಾ ಹಾಗೂ ಶ್ರೀನಿವಾಸ್ ದಂಪತಿ ಮಗ ವೇದೇಶ್ (7) ಮೃತ ಬಾಲಕ. ಮಗು ನಾಟಿ ಔಷಧಿ ಕಹಿ ಎಂದು ಕುಡಿಯಲು ಹಿಂದೇಟು ಹಾಕಿದ್ದಾಗ ತಂದೆ ತಾನು ಸ್ವಲ್ಪ ಕುಡಿದು ಮಗುವಿಗೆ ನಂತರ ಕುಡಿಸಿದ್ದಾನೆ. ಇದರಿಂದ ತಂದೆ ಶ್ರೀನಿವಾಸ್ ಸಹ ಅಸ್ವಸ್ಥನಾಗಿದ್ದಾನೆ. ಅಲ್ಲದೇ ಆತನ ಇನ್ನೋರ್ವ ಪುತ್ರಿ ವೈಶಾಲಿಗೂ ಸಹ ದಪ್ಪ ಆಗಲು ಬೇರೊಂದು ಔಷಧಿಯನ್ನು ನೀಡಲಾಗಿದೆ. ಇದರಿಂದ ಆಕೆ ಅಸ್ವಸ್ಥಳಾಗಿದ್ದಾಳೆ. ಅಸ್ವಸ್ಥರಾಗಿರುವ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಬಾಲಕ ವೇದೇಶ್ಗೆ ದೇಹದ ಮೇಲೆ ಗುಳ್ಳೆಗಳಾಗಿದ್ದವು. ಇದಕ್ಕೆ ವ್ಯಕ್ತಿಯೊಬ್ಬ ಸಲಹೆ ನೀಡಿದ್ದು, ಭೋಯಿನಹಳ್ಳಿ ಗ್ರಾಮದ ಸತ್ಯನಾರಾಯಣ ಎಂಬವರ ಬಳಿ ಔಷಧಿ ಪಡೆದಿದ್ದರು. ಔಷಧಿ ಕುಡಿದ 15 ನಿಮಿಷದಲ್ಲಿ ಬಾಲಕ ತೀವ್ರ ಅಸ್ವಸ್ಥನಾಗಿದ್ದಾನೆ. ಒದ್ದಾಡಿ ಮೂರ್ಛೆ ಹೋಗಿದ್ದಾನೆ. ಬಳಿಕ ಔಷಧ ನೀಡಿದವನಿಗೆ ಕರೆ ಮಾಡಿದ್ದಾರೆ. ಆತ ಆಸ್ಪತ್ರೆಗೆ ಹೋಗುವುದು ಬೇಡ, ಸರಿಯಾಗುತ್ತದೆ ಎಂದು ಹೇಳಿದ್ದಾನೆ. ಆದರೆ ಬಾಲಕನ ಸ್ಥಿತಿ ತೀರಾ ಹದಗೆಟ್ಟಾಗ ಆಸ್ಪತ್ರೆಗೆ ಕರೆದೊಯ್ಯುವ ಸಿದ್ಧತೆ ಮಾಡಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ವೈದ್ಯರು ಪರೀಕ್ಷೆ ನಡೆಸುತ್ತಿದ್ದು, ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.