ನಗರದ ಖಾಸಗಿ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ ವಕೀಲೆ ಕೆ. ಮುಫೀದಾ ರಹ್ಮಾನ್ ಅವರಿಗೆ ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಖಾಸಗಿ ಬಸ್ಸೊಂದರ ಕಂಡೆಕ್ಟರ್ ಮತ್ತು ಚಾಲಕರಾದ ಭರತ್ ಸಾಲ್ಯಾನ್ ಮತ್ತು ಶಿವಕುಮಾರ್ ಎಂಬವರನ್ನು ಕದ್ರಿ ಪೊಲೀಸರು ಶುಕ್ರವಾರ ಬಂಧಿಸಿದ್ದು, ಅವರಿಗೆ ನ್ಯಾಯಾಂಗ ಸೆರೆಯಾಗಿದೆ ಎಂದು ತಿಳಿದು ಬಂದಿದೆ.
ದೇರಳಕಟ್ಟೆ ಸಮೀಪದ ಜಲಾಲ್‌ಬಾಗ್ ನಿವಾಸಿಯಾಗಿರುವ ವಕೀಲೆ ಮುಫೀದಾ ರಹ್ಮಾನ್ ಕಳೆದ ಸೋಮವಾರ ಮಧ್ಯಾಹ್ನ ಸುಮಾರು 2ಕ್ಕೆ ಪಿವಿಎಸ್ ಸರ್ಕಲ್ ಬಳಿ ಬೋಂದೆಲ್‌ನಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ತೆರಳುವ ರೂಟ್ ನಂಬ್ರ 19ರ ‘ಆ್ಯಶೆಲ್’ ಎಂಬ ಹೆಸರಿನ ಖಾಸಗಿ ಬಸ್ಸಿಗೆ ಹತ್ತುವ ವೇಳೆ ಚಾಲಕನು ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿದ್ದರೆ, ಕಂಡೆಕ್ಟರ್ ವಕೀಲೆಯ ಜೊತೆ ಅತಿರೇಕದಿಂದ ವರ್ತಿಸಿ ಮಾನಸಿಕ ಕಿರುಕುಳ ನೀಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಪೊಲೀಸರು ಪ್ರಕರಣ ದಾಖಲಿಸಿಕೊಂಡರೂ ಆರೋಪಿಯನ್ನು ಬಂಧಿಸದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಘಟನೆ ನಡೆದ ನಾಲ್ಕು ದಿನದ ಬಳಿಕ ಆರೋಪಿಗಳನ್ನು ಬಂಧಿಸಿ ಜೆಎಂಎಫ್‌ಸಿ 6ನೆ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಆರೋಪಿಗಳಿಗೆ ನ್ಯಾಯಾಧೀಶರು ನ್ಯಾಯಾಂಗ ಸೆರೆ ವಿಧಿಸಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ ಬಿ. ವಾದಿಸಿದ್ದರು.