ಮಂಗಳೂರಿನಲ್ಲಿ ಮತ್ತೆ ಸ್ಕಿಲ್‌ ಗೇಮ್ ಜೂಜಾಟ ಜೋರು! ಈ ಮಾಯಾ ಆಟಕ್ಕೆ ವಿದ್ಯಾರ್ಥಿಗಳು ಬಲಿ

ಶೇರ್ ಮಾಡಿ

ಮಂಗಳೂರು ಕ್ಷೇತ್ರದಲ್ಲಿ ಸ್ಕಿಲ್ ಗೇಮ್ ದಂಧೆ ಮತ್ತೆ ಆರಂಭವಾಗಿದೆ. ಇದು ಹಿಂದಿನ ಪೊಲೀಸ್ ಕಮಿಷನ‌ ಕುಲದೀಪ್‌ ಜೈನ್‌ ಅವಧಿಯಲ್ಲಿ ಸ್ಥಗಿತವಾಗಿತ್ತು. ಆದರೆ, ಮತ್ತೆ ಈಗ ಆರ್ಭಟಿಸುತ್ತಿದೆ.

ಈ ಮಾಯಾ ಆಟಕ್ಕೆ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಇದಕ್ಕೆ ಹೈಕೋರ್ಟ್‌ನಿಂದ ಅನುಮತಿ ಇದೆಯಾದರೂ ಹಣ ಪಣವಾಗಿಟ್ಟು ಆಡುವಂತಿಲ್ಲ. ಆದರೆ, ನಗರದಲ್ಲಿ ಕೋರ್ಟ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಸ್ಕಿಲ್ ಗೇಮ್ ಕ್ಲಬ್ ನಡೆಸಲಾಗುತ್ತಿದೆ. ಸದ್ಯ ನಗರದ ಬಿಜೈ ಕೆಎಸ್‌ಆರ್‌ಟಿಸಿ, ಸುರತ್ಕಲ್, ಫಳ್ನೀರ್ ಸೇರಿದಂತೆ ನಾಲ್ಕು ಕಡೆ ‘ಸ್ಕಿಲ್ ಗೇಮ್’ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಣೆಯಾಗುವ ಆತಂಕವಿದೆ ಎನ್ನುತ್ತಾರೆ ವಿದ್ಯಾರ್ಥಿಗಳ ಪೋಷಕರು.

ಏನಿದು ಸ್ಕಿಲ್ ಗೇಮ್?
ಸ್ಕಿಲ್ ಗೇಮ್‌ನಲ್ಲಿ ನಾನಾ ರೀತಿಯ ಆಟಗಳಿವೆ. ಕೆಂಪು, ಹಸಿರು, ನೀಲಿ, ಕಪ್ಪು, ಹಳದಿ, ಬಿಳಿ ಹೀಗೆ ಆರು ಬಣ್ಣಗಳ ಪರದೆಯಿದ್ದು, ಯಾವುದಾದರೊಂದು ಬಣ್ಣವನ್ನು ಆಯ್ಕೆ ಮಾಡಿ ಬಾಜಿ ಕಟ್ಟಬೇಕು. ಈ ಪರದೆಗೆ ಗೇಮ್ ನಡೆಸುವಾತ 3 ಬಾಣಗಳನ್ನು ಬಿಡುತ್ತಾನೆ. ಆ ಮೂರು ಬಾಣಗಳು ಪರದೆಯಲ್ಲಿರುವ ಆಟಗಾರ ಆಯ್ಕೆ ಮಾಡಿದ ಬಣ್ಣಗಳಿಗೆ ಬಿದ್ದರೆ ಡಬ್ಬಲ್‌ ಹಣ ಪಡೆಯುವ ಅವಕಾಶವಿದೆ. ಆಯ್ಕೆ ಮಾಡಿದ ಬಣ್ಣಕ್ಕೆ ಬಾಣ ಬೀಳದಿದ್ದರೆ ಹಣ ಕಳೆದುಕೊಳ್ಳಬೇಕು. ಲೂಡೋ ಕಾಯಿನ್ ಗೇಮ್ಸ್, ವಿಡಿಯೊ ಗೇಮ್ಸ್‌ಗಳು ಕೂಡ ಇವೆ. ವಿದ್ಯಾರ್ಥಿಗಳು ಮನೆಯಿಂದ ಸಾವಿರಾರು ರೂ. ತಂದು ಬಾಜಿ ಕಟ್ಟುತ್ತಿದ್ದಾರೆ.

ಕೆಲವರು ಸ್ಕಿಲ್‌ ಗೇಮ್‌ಗೆ ಅನುಮತಿ
ಸ್ಕಿಲ್ ಗೇಮ್ ದಂಧೆ ನಡೆಸುವವರು ಹೈಕೋರ್ಟ್ ಆದೇಶವನ್ನು ದಾಖಲೆಯಾಗಿ ಹಿಡಿದು ಮಹಾ ನಗರಪಾಲಿಕೆ, ಪೊಲೀಸರಿಂದ ಪರವಾನಗಿ ಪಡೆದುಕೊಳ್ಳುತ್ತಾರೆ. ಆದರೆ ಎಲ್ಲೂ ಇದೊಂದು ಜೂಜಾಟ ಎಂದು ಉಲ್ಲೇಖ ಮಾಡುವುದೇ ಇಲ್ಲ. ಇನ್ನು ನಗರ ಪೊಲೀಸರು ಸ್ಕಿಲ್ ಗೇಮ್ ಹಾವಳಿಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಹಣ ಪಣವಾಗಿಟ್ಟು ನಡೆಸುವ ಜೂಜಾಟ ನಿಲ್ಲಿಸದಿದ್ದರೆ ಮುಂದೆ ಆಪತ್ತು ತಪ್ಪಿದ್ದಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಹುಡುಗಿಯರೂ ಮುಂದು!
ಸ್ಕಿಲ್ ಗೇಮ್ ನಿಂದಾಗಿ ಅದೆಷ್ಟೋ ಕುಟುಂಬಗಳು ಸಂಕಷ್ಟಕ್ಕೊಳಗಾಗುತ್ತಿದ್ದು, ವಿದ್ಯಾರ್ಥಿಗಳು, ಯುವ ಸಮುದಾಯ ಇದರಿಂದ ಹೊರಬರಲೆಂದು ಅವರ ಪೋಷಕರು ಹೆಣಗಾಡುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳ ತಾಯಂದಿರು ಕಣ್ಣೀರು ಹಾಕಿ ಪೊಲೀಸ್‌ ಫೋನ್ ಇನ್ ಕಾರ್ಯಕ್ರಮದಲ್ಲಿ ದೂರು ನೀಡಿದ್ದೂ ಇದೆ. ಆದರೆ ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರೇ ಈ ಸ್ಕಿಲ್‌ಗೇಟ್‌ ಜೂಜಾಟ ಕೇಂದ್ರದ ಯಜಮಾನಿಯಾಗಿದ್ದರು.

ಹಣ ಪಣವಾಗಿಟ್ಟು ಆಡುವುದು ಅಪರಾಧ
ಉದ್ಯೋಗಕ್ಕೆ ಹೋಗದೆ ಪ್ರತಿನಿತ್ಯ ಸ್ಕಿಲ್ ಗೇಮ್ ಎಂಬ ಮಾಯಾ ಆಟಕ್ಕೆ ಮರುಳಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಹಣವನ್ನು ಪಣವಾಗಿಟ್ಟು ಗೇಮ್ ಆಡುವುದು ಅಪರಾಧ.

ಖಾದರ್ ಅವಧಿಯಲ್ಲಿ ಸ್ಥಗಿತವಾಗಿತ್ತು!
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹಿಂದಿನ ಸಮಿಶ್ರ ಸರಕಾರದಲ್ಲಿ ಸಚಿವರಾಗಿದ್ದಾಗ ಮಂಗಳೂರು ನಗರ ವ್ಯಾಪ್ತಿಯಲ್ಲಿದ್ದಸ್ಕಿಲ್ ಗೇಮ್, ಮಟ್ಕಾ, ಜೂಜು ಕೇಂದ್ರಗಳನ್ನು ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಖಾದರ್ ಅವರ ಈ ನಡೆ ಶ್ಲಾಘನೆಗೆ ಪಾತ್ರವಾಗಿತ್ತು. ಇದೀಗ ಖಾದರ್ ವಿಧಾನಸಭೆ ಸ್ಪೀಕರ್ ಆಗಿದ್ದು, ಮತ್ತೊಮ್ಮೆ ಸ್ಕಿಲ್‌ ಗೇಮ್ ಸ್ಥಗಿತಗೊಳಿಸಬೇಕೆಂಬ ಆಗ್ರಹ ಕೇಳಿಬಂದಿದೆ.

Leave a Reply

error: Content is protected !!
%d bloggers like this: