ಅಹಮದಾಬಾದ್ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆಯುತ್ತಿರುವ ಭಾರೀ ನಿರೀಕ್ಷೆಯ ಪಂದ್ಯದಲ್ಲಿ ಭಾರತದ ಬೌಲರ್ ಗಳು ಪಾಕಿಸ್ಥಾನವನ್ನು 191 ಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಬಿಗಿ ಬೌಲಿಂಗ್ ದಾಳಿ ಸಂಘಟಿಸಿತು. ಅತ್ಯುತ್ತಮ ನಿರ್ವಹಣೆ ತೋರಿದ ಎಲ್ಲ ಬೌಲರ್ ಗಳು ಬ್ಯಾಟಿಂಗ್ ಬಲವಿರುವ ಪಾಕಿಸ್ಥಾನವನ್ನು 42.5 ಓವರ್ ಗಳಲ್ಲಿ 191 ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
ಆರಂಭಿಕರಾದ ಅಬ್ದುಲ್ಲಾ ಶಫೀಕ್ 20, ಇಮಾಮ್-ಉಲ್-ಹಕ್ 36 ರನ್ ಗಳಿಸಿ ಔಟಾದರು. ಶಫೀಕ್ ಅವರನ್ನು ಸಿರಾಜ್ ಎಲ್ಬಿಡಬ್ಲ್ಯೂ ಮಾಡುವ ಮೂಲಕ ಮೊದಲ ವಿಕೆಟ್ ಕಬಳಿಸಿ ಆಘಾತ ನೀಡಿದರು.
ನಾಯಕ ಬಾಬರ್ ಆಜಮ್ ಗರಿಷ್ಠ 50 ರನ್ ಗಳಿಸಿ ಔಟಾದರೆ ಮೊಹಮ್ಮದ್ ರಿಜ್ವಾನ್ 49 ರನ್ ಗಳಿಸಿದ್ದ ವೇಳೆ ಔಟಾದರು. ,ಸೌದ್ ಶಕೀಲ್ 6, ಇಫ್ತಿಕರ್ ಅಹ್ಮದ್4, ಶಾದಾಬ್ ಖಾನ್ 2, ಮೊಹಮ್ಮದ್ ನವಾಜ್ 4 , ಹಸನ್ ಅಲಿ 12 , ಹಾರಿಸ್ ರೌಫ್ 2 ರನ್ ಗಳಿಸಿ ಔಟಾದರು. ಶಾಹೀನ್ ಅಫ್ರಿದಿ(2) ಔಟಾಗದೆ ಉಳಿದರು.
ಪ್ರತಿಷ್ಠೆಯ ಪಂದ್ಯದಲ್ಲಿ ಅಮೋಘ ನಿರ್ವಹಣೆ ತೋರಿದ ಭಾರತದ ಬೌಲರ್ ಗಳು ನಿರೀಕ್ಷೆಗೂ ಮೀರಿದ ನಿರ್ವಹಣೆ ತೋರಿ ಗಮನಸೆಳೆದರು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಅವರು ತಲಾ 2 ವಿಕೆಟ್ ಪಡೆದರು.