“ಹೋಮಿಯೋಪತಿ” ಒಂದು ವಿಶಿಷ್ಟ ಚಿಕಿತ್ಸಾ ಪದ್ಧತಿ – ಡಾ. ಅನೀಶ್ ಕುಮಾರ್ ಸಾದಂಗಾಯ

ಶೇರ್ ಮಾಡಿ

“ಹೋಮಿಯೋಪತಿ” ಎನ್ನುವ ಶಬ್ದವು ಗ್ರೀಕ್ ಭಾಷೆಯ ಎರಡು ಶಬ್ದಗಳಿಂದ ಮಾಡಲ್ಪಟ್ಟಿದೆ. ‘ಹೋಮೋಸ್’ ಅಂದರೆ ‘ಸಮನಾದ’ ಮತ್ತು ‘ಪ್ಯಾಥೋಸ್’ ಅಂದರೆ ‘ನರಳುವಿಕೆ’ ಎಂದರ್ಥ.
ಚಿಕಿತ್ಸಾ ಮೂಲ-

ಆಯುರ್ವೇದದಲ್ಲಿ ಹೇಳಿದಂತೆ ಎರಡು ವಿಧದ ಚಿಕಿತ್ಸೆಗಳು

  1. ವಿಪರೀತಕಾರಿ ಚಿಕಿತ್ಸೆ
  2. ತದರ್ಥಕಾರಿ ಚಿಕಿತ್ಸೆ

1. ವಿಪರೀತಕಾರಿ ಚಿಕಿತ್ಸೆ ಎಂದರೆ ರೋಗಲಕ್ಷಣಕ್ಕೆ ವಿರುದ್ಧವಾಗಿ ಚಿಕಿತ್ಸೆ ನೀಡಿ ಗುಣಪಡಿಸುವುದು. ಉದಾಹರಣೆಗೆ ಕೈಗೆ ಬಿಸಿ ತಾಗಿದಾಗ ತಣ್ಣೀರಿನಲ್ಲಿ ಅದ್ದುವುದು. ಊತ ಉಂಟಾದಾಗ ಒತ್ತಿ ಹಿಡಿಯುವುದು ಇತ್ಯಾದಿ. ಕ್ಷಣಿಕವಾಗಿ ಇದು ರೋಗದಿಂದ ಮುಕ್ತಿಗೊಳಿಸಿದಂತೆ ಕಂಡರು ಅದರ ನಂತರದ ಪರಿಣಾಮ ಎಷ್ಟೋ ಸಲ ಇನ್ನೂ ತೀಕ್ಷ್ಣವಾಗಿರುತ್ತದೆ. ಎಷ್ಟೇ ಆದರೂ ಇದು ತತ್ಕಾಲಕ್ಕೆ ಪ್ರಯೋಜನವಾದಿತೇ ವಿನಹ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ.

2 .ತದರ್ಥಕಾರಿ ಚಿಕಿತ್ಸೆಯಲ್ಲಿ, “ಉಷ್ಣಂ ಉಷ್ಣೇನ ಶಾಮ್ಯತೆ” ಎನ್ನುವಂತೆ ಸಮದಿಂದ ಸಮವನ್ನು ಗುಣಪಡಿಸುವುದು(similia similibus curentur). ಸರಳವಾಗಿ ಹೇಳಬೇಕೆಂದರೆ ಒಬ್ಬ ವ್ಯಕ್ತಿಯಲ್ಲಿರುವ ರೋಗ ಲಕ್ಷಣಗಳು ಹಾಗೂ ಅವನಿಗೆ ಕೊಡುವ ಔಷಧದ ಲಕ್ಷಣಗಳು ಸಾದ್ರೂಪ್ಯತೆ ಇದ್ದರೆ ಆ ರೋಗ ಉಪಶಮನಗೊಳ್ಳುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿಗೆ ಜ್ವರ ಬಂದಿದ್ದು ಮುಖ ಕೆಂಪಾಗಿದ್ದರೆ “ಬೆಲ್ಲಡೋನಾ” ಸತ್ವವನ್ನು ( ಈ ಔಷಧವನ್ನು ಆರೋಗ್ಯವಂತ ಮನುಷ್ಯನ ಮೇಲೆ ಪರೀಕ್ಷಿಸುವಾಗ (drug proving- ವಿಷಯದ ಬಗ್ಗೆ ಮುಂದೆ ಬರೆಯುವೆ) ಜ್ವರ ಮತ್ತು ಮುಖ ಕೆಂಪಾಗುವಿಕೆ ಲಕ್ಷಣ ಕಂಡುಬಂದಿರುತ್ತದೆ) ನೀಡಿದಾಗ ಜ್ವರ ಅತಿ ಶೀಘ್ರವಾಗಿ ಸಂಪೂರ್ಣ ಉಪಶಮನಗೊಳ್ಳುತ್ತದೆ.

ಹೋಮಿಯೋಪತಿಗೆ ರೂಪರೇಷೆ ಬಂದ ಸಮಯ-
1755 ಏಪ್ರಿಲ್ 10ರಂದು ಜರ್ಮನಿಯ ಮೆಸನ್ನಲ್ಲಿ ಹುಟ್ಟಿದ ಡಾ. C F ಸ್ಯಾಮುವೆಲ್ ಹನಿಮನ್(Dr. Christian Fredric Samuel Hahnemann) ತನ್ನ ವಿಚಾರವಾದಿ ಮನೋಭಾವ ಮತ್ತು ತಾರ್ಕಿಕ ಸಿದ್ಧಾಂತಗಳಿಂದ ಹೋಮಿಯೋಪತಿಯಂತಹ ಶ್ರೇಷ್ಠ ವೈದ್ಯಕೀಯ ಪದ್ಧತಿಯನ್ನು ಲೋಕಕ್ಕೆ ಪರಿಚಯಿಸಿದರು. ವೃತ್ತಿಯಲ್ಲಿ ಅಲೋಪತಿ ವೈದ್ಯರಾಗಿದ್ದು ಅಲ್ಲಿ ನಡೆಯುತ್ತಿದ್ದ ಪ್ರಕ್ರಿಯೆಗಳಾದ ರಕ್ತಸ್ರವಿಸುವಿಕೆ, ಕಪ್ಪಿಂಗ್ ಮುಂತಾದ ಹಿಂಸಾತ್ಮಕ ಚಟುವಟಿಕೆಗಳನ್ನು ನೋಡಿ ಬೇಸತ್ತು ತನ್ನ ವೃತ್ತಿಯನ್ನು ಬಿಟ್ಟಿದ್ದರು. ರಸಾಯನ ಶಾಸ್ತ್ರದಲ್ಲಿ ವಿಶೇಷ ಆಸಕ್ತರಾಗಿ ಹಲವಾರು ಭಾಷೆಗಳ ಪಾಂಡಿತ್ಯ ಹೊಂದಿದ್ದ ಹಾನಿಮನ್ನರು ವೈದ್ಯಕೀಯ ಪುಸ್ತಕಗಳನ್ನು ಭಾಷಾಂತರಿಸುವ ವೃತ್ತಿಯನ್ನು ಆರಂಭಿಸಿದರು. ಹೀಗೆ ಡಾ. ಕಲ್ಲೆನ್ರವರ ಮೆಟೀರಿಯ ಮೆಡಿಕವನ್ನು ಭಾಷಾಂತರಿಸುತ್ತಿದ್ದಾಗ “ಪೆರುಯಿಯನ್ ಮರ(Cinchona Officinalis)ದ ತೊಗಟೆಯ ರಸವು ಮಲೇರಿಯಾಕ್ಕೆ ಚಿಕಿತ್ಸಾ ಗುಣ ಹೊಂದಿದೆ ಎಂದು ಓದಿದ್ದರು”. ಇದನ್ನು ತಾರ್ಕಿಕವಾಗಿ ಗಮನಿಸಿದ ಹಾನಿಮನ್ನರು ಸ್ವತಃ ಸೇವಿಸಲು ಆರಂಭಿಸಿದರು. ಪರಿಣಾಮವಾಗಿ ಅವರಿಗೆ ಮಲೇರಿಯಾ ರೀತಿಯ ಲಕ್ಷಣಗಳು ಕಂಡು ಬರಲು ಆರಂಭವಾಯಿತು. ಅದೇ ರಸವನ್ನು ದುರ್ಬಲಗೊಳಿಸಿ ಸಣ್ಣ ಪ್ರಮಾಣದಲ್ಲಿ ಸೇವಿಸಿದಾಗ ಲಕ್ಷಣಗಳು ಸಂಪೂರ್ಣವಾಗಿ ಉಪಶಮನಗೊಂಡವು. ಇದನ್ನ ತನ್ನ ಮನೆಯವರ ಮೇಲೂ ಪ್ರಯೋಗಿಸಿ ಸಾರೂಪ್ಯವಾದ ಫಲಿತಾಂಶವನ್ನು ಅಲ್ಲಿಯೂ ಪಡೆದರು. ಒಂದು ನಿಗೂಢವಾದಂತ ರಹಸ್ಯವನ್ನು ಬೆಳಕಿಗೆ ತಂದರು. ಯಾವ ವಸ್ತುವು ರೋಗ ಕಾರಕವಾಗಿರುತ್ತದೆಯೋ ಅದೇ ವಸ್ತುವಿಗೆ ಸಣ್ಣ ಪ್ರಮಾಣದಲ್ಲಿ ರೋಗವನ್ನು ಗುಣ ಮಾಡಿಸುವ ಶಕ್ತಿ ಇದೆ ಎಂಬ ಸಿದ್ದಾಂತವನ್ನು ನೈಸರ್ಗಿಕ ಸತ್ಯವನ್ನು ಕಂಡುಕೊಂಡರು. ಬೇರೆ ವಸ್ತುಗಳಿಂದಲೂ ಮತ್ತೆ ಸಾಬೀತುಪಡಿಸಿಕೊಂಡರು. ‘ಮುಳ್ಳನ್ನು ಮುಳ್ಳಿನಿಂದಲೇ ತೆಗೆ’ ಎನ್ನುವ ಸಿದ್ಧಾಂತಕ್ಕೆ ಬದ್ಧರಾಗಿ ಅದನ್ನೇ ‘Law of similars’ ಎಂದು ಕರೆದರು. ಹೀಗೆ 1790 ರ ಸಮಯದಲ್ಲಿ ನೂತನ ವಿಶಿಷ್ಟವಾದ ವೈದ್ಯ ಪದ್ಧತಿಯೊಂದು ಉಗಮವಾಯಿತು. ಕಾಲಕ್ರಮೇಣ ನಿರಂತರ ಅಧ್ಯಯನದಿಂದ ಹಲವು ತತ್ವ ಸಿದ್ಧಾಂತಗಳನ್ನು ರೂಪಿಸಿ “Organon of Medicine” ಎನ್ನುವ ಪುಸ್ತಕದಲ್ಲಿ ಬರೆದರು. ಇದು ಆರು ಆವೃತ್ತಿಗಳನ್ನು ಕಂಡಿತ್ತು. 291 ಸೂತ್ರಗಳನ್ನೊಳಗೊಂಡ ಈ ಪುಸ್ತಕ ಈಗ ಹೋಮಿಯೋಪತಿಯ ಮೂಲ ಗ್ರಂಥ ಅಥವಾ “ಹೋಮಿಯೋಪತಿಯ ಭಗವದ್ಗೀತೆ” ಎಂದು ಕರೆದರೂ ಅತಿಶಯೋಕ್ತಿ ಆಗಲಾರದು.

ಮುಂದುವರಿಯುವುದು..

ಡಾ.ಅನೀಶ್ ಕುಮಾರ್ ಸಾದಂಗಾಯ BHMS, MD(Hom)
ಜ್ಯೋತಿವೈದ್ಯ ಹೋಮಿಯೋ ಕ್ಲಿನಿಕ್, ದುರ್ಗಾಶ್ರೀ ಟವರ್ಸ್ ನೆಲ್ಯಾಡಿ
9900224260

Leave a Reply

error: Content is protected !!