ಗುಜರಾತ್‌ನ ಸೂರತ್‌ನಲ್ಲಿ 5 ದಿನದ ಮೆದುಳು ನಿಷ್ಕ್ರಿಯಗೊಂಡ ಶಿಶುವಿನಿಂದ ಹೊರತೆಗೆಯಲಾದ ಅಂಗಗಳು ಮೂವರು ಮಕ್ಕಳಿಗೆ ಹೊಸ ಬದುಕನ್ನು ನೀಡಿವೆ.
ಖಾಸಗಿ ಆಸ್ಪತ್ರೆಯಲ್ಲಿ ಅಕ್ಟೋಬರ್ 13 ರಂದು ಗಂಡು ಮಗು ಜನಿಸಿತ್ತು, ಆದರೆ ಅದು ಯಾವುದೇ ಚಲನೆಯನ್ನು ತೋರುತ್ತಿರಲಿಲ್ಲ ಎಂದು ವೈದ್ಯರು ಹೇಳಿದ ನಂತರ ಹೆತ್ತವರ ಸಂತೋಷವು ಅಲ್ಪಕಾಲಿಕವಾಗಿತ್ತು.
ಸೂರತ್ ನಗರದ ಇನ್ನೊಂನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲು ಆರಂಭಿಸಲಾಯಿತಾದರೂ ವೈದ್ಯರ ತೀವ್ರ ಪ್ರಯತ್ನದ ಹೊರತಾಗಿಯೂ ಮೆದುಳು ನಿಷ್ಕ್ರಿಯಗೊಂಡಿರುವ ಮಗುವನ್ನು ಉಳಿಸಿಕೊಳ್ಳುವುದು ಕಷ್ಟವೆಂದು ತಿಳಿಸಿದರು.
ಈ ವೇಳೆ ಜೀವನ್‌ದೀಪ್ ಅಂಗದಾನ ಪ್ರತಿಷ್ಠಾನದ (ಜೆಒಡಿಎಫ್) ವ್ಯವಸ್ಥಾಪಕ ಟ್ರಸ್ಟಿ ವಿಪುಲ್ ತಾಲವಿಯಾ ಶಿಶುವಿನ ಸ್ಥಿತಿಯ ಬಗ್ಗೆ ತಿಳಿದು ಸರ್ಕಾರಿ ನ್ಯೂ ಸಿವಿಲ್ ಆಸ್ಪತ್ರೆಯ ಡಾ.ನಿಲೇಶ್ ಕಚಡಿಯಾ ಅವರ ಶಿಶುವೈದ್ಯಕೀಯ ಕೇಂದ್ರಕ್ಕೆ ತಲುಪಿದರು, ಅಲ್ಲಿ ಮಗುವನ್ನು ದಾಖಲಿಸಿ ಅಂಗಾಂಗ ದಾನದ ಮೂಲಕ ಬೇರೆ ಮಕ್ಕಳ ಜೀವ ಉಳಿಸಲು ಅವರ ಪೋಷಕರ ಮನವೊಲಿಸಲು ಮುಂದಾದರು. ಮಗುವಿನ ಹೆತ್ತವರಾದ ಹರ್ಷ ಸಂಘಾನಿ ಮತ್ತು ಪತ್ನಿ ಚೇತನಾ ಅವರ ಮನವೊಲಿಸಿದರು. ಹರ್ಷ ವಜ್ರದ ಕುಶಲಕರ್ಮಿಯಾಗಿದ್ದು ಅಮ್ರೇಲಿ ಜಿಲ್ಲೆಯವರು.
ಪೋಷಕರು ನೋವಿನಲ್ಲೂ ತಮ್ಮ ಮಗು ಇನ್ನೊಬ್ಬರ ಬದುಕಿಗೆ ನೆರವಾಗಲಿ ಎಂದು ಅಂಗಾಂಗ ದಾನ ಮಾಡಲು ದೃಢ ನಿರ್ಧಾರ ತಳೆದು ಮಾದರಿಯಾದರು.
ಕುಟುಂಬದ ಒಪ್ಪಿಗೆ ಪಡೆದ ನಂತರ, ಪಿಪಿ ಸವಾನಿ ಆಸ್ಪತ್ರೆಯ ವೈದ್ಯರು ಬುಧವಾರ ಮಗುವಿನ ದೇಹದಿಂದ ಎರಡು ಮೂತ್ರಪಿಂಡಗಳು, ಎರಡು ಕಾರ್ನಿಯಾಗಳು, ಯಕೃತ್ತು ಮತ್ತು ಗುಲ್ಮವನ್ನು ತೆಗೆದಿದ್ದಾರೆ. ಗುಜರಾತ್ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯ (SOTTO) ನಿರ್ದೇಶನದಂತೆ, ಕಾರ್ನಿಯಾಗಳನ್ನು ಸೂರತ್‌ನ ಕಣ್ಣಿನ ಬ್ಯಾಂಕ್‌ಗೆ ದಾನ ಮಾಡಲಾಯಿತು, ಆದರೆ ಮೂತ್ರಪಿಂಡಗಳು ಮತ್ತು ಗುಲ್ಮವನ್ನು ತತ್ ಕ್ಷಣ ಇನ್‌ಸ್ಟಿಟ್ಯೂಟ್ ಆಫ್ ಕಿಡ್ನಿ ಡಿಸೀಸ್ ಮತ್ತು ರಿಸರ್ಚ್ ಸೆಂಟರ್ (IKDRC) ಗೆ ಸಾಗಿಸಲಾಯಿತು. ಯಕೃತ್ತನ್ನು ನವದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್ (ಐಎಲ್‌ಬಿಎಸ್) ಗೆ ಕಳುಹಿಸಲಾಗಿದೆ.
ನವ ದೆಹಲಿಯಲ್ಲಿ ಶಿಶುವಿನ ಯಕೃತ್ತನ್ನು ಒಂಬತ್ತು ತಿಂಗಳ ಮಗುವಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ ಎಂದು ನಾವು ಈಗಷ್ಟೇ ತಿಳಿದುಕೊಂಡಿದ್ದೇವೆ ಎಂದು ತಾಲವಿಯಾ ಹೇಳಿದರು. ಮಗುವಿನ ಎರಡು ಮೂತ್ರಪಿಂಡಗಳು 13 ವರ್ಷ ಮತ್ತು 15 ವರ್ಷ ವಯಸ್ಸಿನ ಇಬ್ಬರು ಮಕ್ಕಳಿಗೆ ಹೊಸ ಜೀವನವನ್ನು ನೀಡಿವೆ ಎಂದು IKDRC ನಿರ್ದೇಶಕ ಡಾ ವಿನೀತ್ ಮಿಶ್ರಾ ಗುರುವಾರ ದೃಢಪಡಿಸಿದ್ದಾರೆ.