ಈ ವರ್ಷ SSLC ಪರೀಕ್ಷೆ ಬರೆಯುವವರಿಗೆ ಗುಡ್‌ನ್ಯೂಸ್: ಅಧಿಕ ಅಂಕಗಳಿಗಾಗಿ ಓದುವ ವಿಧಾನ ಹೀಗಿರಲಿ ಅಷ್ಟೆ!

ಶೇರ್ ಮಾಡಿ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯೂ ಈ ಬಾರಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಈ ಬಾರಿ ಪರೀಕ್ಷೆ-1, ಪರೀಕ್ಷೆ-2, ಪರೀಕ್ಷೆ-3 ಎಂದು ಮೂರು ಪರೀಕ್ಷೆಗಳನ್ನು ಮಂಡಲಿ ನಡೆಸುತ್ತಿದೆ. ಅಂದಹಾಗೆ ಈ ರೀತಿಯ ಮೂರು ಪರೀಕ್ಷೆಯು ವಿದ್ಯಾರ್ಥಿ ತಾನು ಪರೀಕ್ಷೆ ಬರೆದು ನಿರೀಕ್ಷಿತ ಫಲಿತಾಂಶ ಪಡೆಯದಿದ್ದಲ್ಲಿ, ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಈ ಪರೀಕ್ಷೆ ಬರೆಯಬಹುದು. ಒಂದು ವೇಳೆ ಎರಡು ಅಥವಾ ಮೂರನೇ ಬಾರಿ ಪರೀಕ್ಷೆಗಳನ್ನು ಬರೆದರೆ, ಮೂರರಲ್ಲಿ ಯಾವುದು ಹೆಚ್ಚು ಅಂಕಗಳನ್ನು ಹೊಂದಿರುತ್ತದೋ ಆ ಫಲಿತಾಂಶವನ್ನು ಆಯ್ಕೆ ಮಾಡಿಕೊಳ್ಳಬಹುದು.

ನೀವು 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಾಗಿದ್ದಲ್ಲಿ, ಅತಿಹೆಚ್ಚು ಅಂಕಗಳಿಸಬೇಕು ಎಂದಲ್ಲಿ ವಿಷಯವಾರು ಅಧ್ಯಯನ ತಂತ್ರಗಾರಿಕೆ ಹೇಗಿರಬೇಕು ಎಂದು ತಿಳಿದುಕೊಳ್ಳಿ. ಹಾಗೆಯೇ ತಪ್ಪದೇ ಫಾಲೋ ಮಾಡಿರಿ.

ಈ ಸಂಗತಿಗಳು ತಿಳಿದಿರಲಿ
ಮೊದಲ ಬಾರಿಗೆ ಎಸ್‌ಎಸ್‌ಎಲ್‌ಸಿ ಬೋರ್ಡ್‌ ಎಕ್ಸಾಮ್‌ ಬರೆಯುವವರು ನೀವಾಗಿದ್ದಲ್ಲಿ ಪರೀಕ್ಷೆ, ಫಲಿತಾಂಶ, ಕಠಿಣತೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿರಿ. ಇತ್ತೀಚಿನ ದಿನಗಳಲ್ಲಿ, ಅದರಲ್ಲೂ ದಿನನಿತ್ಯ ಓದುವವರು ನೀವಾಗಿದ್ದಲ್ಲಿ ಖಂಡಿತ ಶೇಕಡ.80 ಕ್ಕಿಂತ ಹೆಚ್ಚು ಅಂಕಗಳಿಸುವುದು ಸುಲಭವಾಗಿದೆ.

ಪರೀಕ್ಷೆ ತಯಾರಿಗೆ ಪ್ರತಿದಿನದ ಚಟುವಟಿಕೆಗಳು ಹೀಗಿರಲಿ
ಗಂಭೀರವಾಗಿ ಗಮನ ಕೇಂದ್ರೀಕರಿಸುವ ಸಲುವಾಗಿ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿ. ಕನಿಷ್ಠ 10 – 30 ನಿಮಿಷದವರೆಗೆ ಮೆಡಿಟೇಶನ್ ಮಾಡಿರಿ. ನಿಮ್ಮ ಮನಸ್ಥಿತಿ ನಿಮ್ಮ ದಿನಚರಿ ನಿರ್ಧಾರ ಮಾಡಲು ಅವಕಾಶ ನೀಡಬೇಡಿ. ಪ್ರತಿದಿನವು ಸಹ ನಿಮ್ಮ ಎಲ್ಲ ವಿಷಯಗಳಿಗೂ ಸಮಯ ನೀಡಿ ಓದುವ ಅಭ್ಯಾಸ ಇರಲಿ. ಗಣಿತ ಸಮಸ್ಯೆಗಳನ್ನು ದಿನನಿತ್ಯ ಅಭ್ಯಾಸ ಮಾಡುವುದನ್ನು ದಯವಿಟ್ಟು ಮರೆಯದಿರಿ. ರಾಜಿಯಾಗದೇ ಕಡ್ಡಾಯವಾಗಿ 6-7 ಗಂಟೆ ನಿದ್ರೆ ಮಾಡಿರಿ.

ವಾರಾಂತ್ಯದಲ್ಲಿ ಹೀಗಿರಲಿ ಓದು..
ನಿಮ್ಮ ಹವ್ಯಾಸಗಳಿಗೆ ಸಮಯ ನೀಡಿ. ಪರೀಕ್ಷೆ ಎಂಬ ಭಯವನ್ನು ಬಿಡಿ. ಹವ್ಯಾಸಗಳ ಸಮಯ ಮುಗಿದ ನಂತರ ಓದು ಆರಂಭಿಸಿ. ಯಾವುದೇ ವಿಷಯದ ಅಧ್ಯಾಯ ತೆಗೆದುಕೊಂಡರೂ ಒಮ್ಮೆಲೇ ಓದಿ ಮುಗಿಸಿ, ಅದಕ್ಕೆ ರೆಫರೆನ್ಸ್‌ ಬುಕ್‌ ಇದ್ದಲ್ಲಿ ಓದಿರಿ. ನಿಮ್ಮ ಎನರ್ಜಿ ಬೂಸ್ಟ್‌ ಮಾಡಲು ಆಗಾಗ ವಾಕ್‌ ಮಾಡುವುದು, ವ್ಯಾಯಾಮ ಮಾಡುವುದು, ಕುಟುಂಬದವರೊಂದಿಗೆ ಸಮಯ ನೀಡುವುದನ್ನು ಮರೆಯದಿರಿ.

ಗಣಿತ ವಿಷಯದ ಪರೀಕ್ಷೆ ತಯಾರಿಗೆ ಟಿಪ್ಸ್‌
ಸೂತ್ರಗಳನ್ನು ಬರೆದಿಟ್ಟು ಓದಿಕೊಳ್ಳಲು ಪ್ರತ್ಯೇಕ ನೋಟ್‌ಬುಕ್‌ ಇಡಿ. ಪ್ರಮುಖ ವ್ಯಾಖ್ಯಾನಗಳು, ಥಿಯರಿ, ಉದಾಹರಣೆಗಳನ್ನು ಇದರಲ್ಲಿ ಬರೆದಿಡಿ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿರುವವರು ಡಿಸೆಂಬರ್ ಹೊತ್ತಿಗೆ ಪಠ್ಯಕ್ರಮ ಮುಗಿಸಲು ಪ್ರಯತ್ನಿಸಿ. ಡಿಸೆಂಬರ್ ನಂತರ ಪ್ರತಿ ಸಮಸ್ಯೆಗಳನ್ನು ಬಿಡಿಸಲು ಆರಂಭಿಸಿ, ಉದಾಹರಣೆಗಳೊಂದಿಗೆ ಅಭ್ಯಾಸ ಮಾಡಿರಿ. ವಿಶೇಷ ಗಮನವನ್ನು ಒಂದು ಅಂಕದ ಪ್ರಶ್ನೆ ಆಗಿರಲಿ, 5 ಅಂಕದ ಪ್ರಶ್ನೆ ಆಗಿರಲಿ ಕಡ್ಡಾಯವಾಗಿ ಎಲ್ಲದಕ್ಕೂ ನೀಡಿರಿ.ಸಮಯದ ನಿರ್ವಹಣೆಯ ಕಡೆ ಗಮನವಿರಲಿ. 4-5 ಸ್ಯಾಂಪಲ್ ಪೇಪರ್ ಬಗೆಹರಿಸಿದ ನಂತರ, ಹಿಂದಿನ ವರ್ಷದ ಬೋರ್ಡ್‌ ಎಕ್ಸಾಮ್‌ ಪತ್ರಿಕೆಗಳನ್ನು ಬಗೆಹರಿಸಿ.

ವಿಜ್ಞಾನ ವಿಷಯಕ್ಕೆ ತಯಾರಿ ಟಿಪ್ಸ್‌
ಹೆಚ್ಚಾಗಿ ಪಠ್ಯಪುಸ್ತಕಗಳನ್ನು ಓದಿರಿ. ಒಂದು ಅಂಕದ ಪ್ರಶ್ನೆಗೆ ಸ್ವಂತ ನೋಟ್ಸ್‌ ಮಾಡಿಕೊಳ್ಳಿ. ದೀರ್ಘ ಉತ್ತರಗಳನ್ನು ನೀಡಲು ಯಾವುದೇ ವಿಷಯದ ಬಗ್ಗೆ ಸ್ಪಷ್ಟತೆ ಪಡೆದುಕೊಳ್ಳಿ. ಕಠಿಣ ಟಾಪಿಕ್‌ಗಳ ಕುರಿತು ನೋಟ್ಸ್‌ ಮಾಡಿಕೊಳ್ಳಿ.

ಭೌತಶಾಸ್ತ್ರ/ ರಸಾಯನಶಾಸ್ತ್ರ / ಜೀವಶಾಸ್ತ್ರ / ವಿಷಯದ ತಯಾರಿಗೆ ಟಿಪ್ಸ್‌

ಭೌತಶಾಸ್ತ್ರ
ವ್ಯಾಖ್ಯಾನ, ಸೂತ್ರಗಳು, ನಿಯಮಗಳಿಗೆ ಪ್ರತ್ಯೇಕ ನೋಟ್‌ ಬುಕ್‌ ಇರಲಿ. ಎಲ್ಲಾ ಉದಾಹರಣೆಗಳು ಹಾಗೂ ಸಮಸ್ಯೆಗಳನ್ನು ಬಿಡಿಸಿ.
ರಸಾಯನಶಾಸ್ತ್ರ
ಸಮೀಕರಣಗಳನ್ನು ಅರ್ಥಮಾಡಿಕೊಳ್ಳಿ, ಪ್ರತ್ಯೇಕವಾಗಿ ಬರೆದಿಟ್ಟುಕೊಳ್ಳಿ. ಆವರ್ತಕ ಕೋಷ್ಠಕದ ಕನಿಷ್ಠ 30 ಅಂಶಗಳನ್ನು ತಿಳಿದುಕೊಳ್ಳಿ. ಪುಸ್ತಕದ ಒಳಗಿರುವ ಪ್ರತಿಯೊಂದು ಬಾಕ್ಸ್‌ನಲ್ಲಿನ ವಿಷಯಗಳನ್ನು ಓದಿರಿ ಮತ್ತು ಎಲ್ಲಾ ಪಠ್ಯದ ಪ್ರಶ್ನೆಗಳಿಗೆ ಉತ್ತರಿಸಿ.

ಜೀವಶಾಸ್ತ್ರ
ಸಂಕ್ಷಿಪ್ತ, ನಿಖರವಾದ ಟಿಪ್ಪಣಿಗಳನ್ನು ಮಾಡಿ. ಉದಾಹರಣೆಗಳನ್ನು ನೆನಪಿನಲ್ಲಿ ಇಡಲು, ಮೆಮೋನಿಕ್ಸ್‌ (ಚಿತ್ರ ಸಹಿತ ಮಾಹಿತಿ) ಬಳಸಿ.

ಸಮಾಜ ವಿಜ್ಞಾನ ವಿಷಯ ತಯಾರಿಗೆ ಟಿಪ್ಸ್‌
ಪ್ರಮುಖ ಅಂಶಗಳನ್ನು ನೋಟ್ಸ್‌ ಮಾಡಿರಿ. ಪಾಯಿಂಟ್ಸ್‌ಗಳ ಮೂಲಕ ಪ್ರಶ್ನೆಗಳಿಗೆ ಉತ್ತರಿಸಿ. ಯುದ್ಧಗಳು, ಒಪ್ಪಂದಗಳ ಇಸವಿಗಳು, ಯಾರ ನಡುವೆ ನಡೆಯಿತು ಎಂಬುದನ್ನೆಲ್ಲಾ ಪ್ರತ್ಯೇಕವಾಗಿ ಬರೆದುಕೊಂಡು ಓದಿರಿ. ನಕ್ಷೆ ಬರೆಯುವುದನ್ನು, ಸ್ಥಳಗಳನ್ನು ಗುರುತಿಸುವುದನ್ನು ಅಭ್ಯಾಸ ಮಾಡಿರಿ. ದೀರ್ಘ ಉತ್ತರ ನೀಡುವ ಬಗ್ಗೆ ಶಿಕ್ಷಕರಿಂದ ಸಲಹೆ ಪಡೆಯಿರಿ.

ಇಂಗ್ಲಿಷ್ ವಿಷಯಕ್ಕೆ ತಯಾರಿ ಹೀಗಿರಲಿ
ಇಂಗ್ಲಿಷ್‌ ಸಾಹಿತ್ಯವನ್ನು ಪ್ರತಿ ಅಧ್ಯಾಯ, ಪದ್ಯದ ಮೂಲಕ ಪೂರ್ಣವಾಗಿ ಓದಿಕೊಳ್ಳಿ. ಕೆಲವು ಪುರಾವೆಗಳೊಂದಿಗೆ ಪಾತ್ರಗಳ ಹೆಸರು ಮತ್ತು ಅವುಗಳ ವಿಶೇಷತೆ ಬಗ್ಗೆ ನೆನಪಿಡಿ. ಇಂಗ್ಲಿಷ್‌ ವ್ಯಾಕರಣ ತಯಾರಿಗಾಗಿ – ಹಿಂದಿನ ವರ್ಷದ ಪೇಪರ್‌ಗಳನ್ನು ಬಿಡಿಸಿ. ಬುಕ್‌ನಲ್ಲಿ ಕನಿಷ್ಟ ಪ್ರತಿ ಚಾಪ್ಟರ್‌ನ ಸಾರಾಂಶವನ್ನು ಓದಿಕೊಂಡಿರಲು ಮರೆಯದಿರಿ.

ಪರೀಕ್ಷೆಗೆ ಮುನ್ನ
ಸೂತ್ರಗಳು, ಅವಧಿಗಳು, ವ್ಯಾಖ್ಯಾನಗಳನ್ನು ಪುನರಾವರ್ತನೆ ಮಾಡಿ. ನಿಮ್ಮ ನೋಟ್ಸ್‌ ಅನ್ನು ಪೋಷಕರು / ಸ್ನೇಹಿತರೊಡನೆ ಅಥವಾ ಒಬ್ಬರೇ ಓದಿರಿ, ವಿವರಿಸಿಕೊಳ್ಳಿ. ಪರೀಕ್ಷೆಗೆ ಕನಿಷ್ಠ 2 ತಿಂಗಳ ಮುಂಚಿತವಾಗಿ ಪುನರಾವರ್ತನೆ ಆರಂಭಿಸಬೇಕು. ಆದ್ದರಿಂದ ಈ ಕಾಲಾವಕಾಶಕ್ಕಿಂತ ಮುಂಚಿತವಾಗಿ ಪಠ್ಯಕ್ರಮ ಓದಿ ಮುಗಿಸಿ. ಪರೀಕ್ಷೆ ಬಗ್ಗೆ ಭಯ ಬೇಡ, ಆತ್ಮವಿಶ್ವಾಸ ಇರಲಿ. ನಿಮ್ಮ ಬೆಳವಣಿಗೆಗೆ ಇದು ಪರೀಕ್ಷೆ, ನಿಮ್ಮ ಕನಸಿಗೆ ಇದು ವೇದಿಕೆ ಎಂದು ಭಾವಿಸಿ. ಭಯ ಬಿಟ್ಟು ಓದಿರಿ.

Leave a Reply

error: Content is protected !!