ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಕುತ್ತಿಗೆಗೆ ಹುಲಿಯ ಉಗುರು ಹೊಂದಿರುವ ಲಾಕೆಟ್ ಧರಿಸಿದ್ದರು ಎನ್ನುವ ಕಾರಣಕ್ಕಾಗಿ ಎರಡು ದಿನಗಳ ಹಿಂದೆಯಷ್ಟೇ ಬಿಗ್ ಬಾಸ್ ಮನೆಯಿಂದಲೇ ಅವರನ್ನು ಬಂಧಿಸಲಾಗಿತ್ತು. ನಿನ್ನೆ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. ಎ.ಸಿ.ಜೆ.ಎಂ ನ್ಯಾಯಾಧೀಶರು 14 ದಿನಗಳ ಕಾಲ ಸಂತೋಷ್ ಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಾಗಾಗಿ ಪರಪ್ಪನ ಅಗ್ರಹಾರ ಜೈಲಿಗೆ ಅವರನ್ನು ಕಳುಹಿಸಲಾಗಿದೆ. ಸಂತೋಷ್ ಅವರಿಗೆ ಕೈದಿ ನಂಬರ್ ಕೂಡ ನೀಡಲಾಗಿದೆ.
ವರ್ತೂರ್ ಸಂತೋಷ್ ಅವರಿಗೆ ಕಾರಗೃಹ ಅಧಿಕಾರಿಗಳು ವಿಚಾರಣಾಧೀನ ಕೈದಿ ಸಂಖ್ಯೆ 10935 ಅನ್ನು ನೀಡಿದ್ದಾರೆ. ಕೋರ್ಟಿಗೆ ರಜೆ ಇದ್ದ ಕಾರಣದಿಂದಾಗಿ ನ್ಯಾಯಾಧೀಶರ ನಿವಾಸಕ್ಕೆ ಸಂತೋಷ್ ಅವರನ್ನು ಹಾಜರು ಪಡಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನದ ಚೈನು ಮಾಡಿರುವ ಚಿನ್ನದಂಗಡಿ ಮಾಲೀಕನಿಗೆ ಅರಣ್ಯಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಹುಲಿ ಉಗುರು ಕೊಟ್ಟಿದ್ದ್ಯಾರು?
ಬಿಗ್ ಬಾಸ್ ಮನೆಯಿಂದ ಮೊನ್ನೆಯಷ್ಟೇ ಅರೆಸ್ಟ್ ಆಗಿರುವ ಸ್ಪರ್ಧಿ ವರ್ತೂರ ಸಂತೋಷ ಅವರನ್ನು ಅರಣ್ಯಾಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ತನ್ನಲ್ಲಿರುವ ಹುಲಿ ಉಗುರು ಬಂದಿದ್ದು ಹೇಗೆ? ಯಾರು ಕೊಟ್ಟರು? ಎಲ್ಲಿಂದ ಖರೀದಿ ಮಾಡಿದ್ದೀರಿ? ಮಾರಿದವರು ಈಗ ಎಲ್ಲಿದ್ದಾರೆ? ಎಷ್ಟು ಮಂದಿಗೆ ಈ ರೀತಿ ಉಗುರು ಮಾರಲಾಗಿದೆ ಹೀಗೆ ಇತ್ಯಾದಿ ಪ್ರಶ್ನೆಗಳನ್ನು ಅರಣ್ಯಾಧಿಕಾರಿಗಳು ಸಂತೋಷ್ ಮುಂದೆ ಇಟ್ಟಿದ್ದಾರೆ. ಅದಕ್ಕೆ ಸಂತೋಷ್ ಕೂಡ ಉತ್ತರ ನೀಡಿದ್ದಾರೆ ಎನ್ನುವ ಮಾಹಿತಿ ಇದೆ.
ಅಪರಿಚತರು ಹುಲಿ ಉಗುರನ್ನು ಮಾರಾಟಕ್ಕೆ ತಂದಿದ್ದರು. ಅವರು ಎಲ್ಲಿಂದ ಬಂದಿದ್ದರು, ಯಾರು ಎನ್ನುವುದು ನನಗೆ ಗೊತ್ತಿಲ್ಲ. ಮಾರಾಟ ಮಾಡುತ್ತಿರುವ ವಿಷಯ ಗೆಳೆಯರಿಂದ ತಿಳಿಯಿತು. ಹಣ ಕೊಟ್ಟು ಇದನ್ನು ಖರೀದಿ ಮಾಡಿದ್ದೇನೆ ಎಂದು ಅಧಿಕಾರಿಗಳ ಮುಂದೆ ಸಂತೋಷ್ ಹೇಳಿದ್ದಾರೆ ಎನ್ನುವುದು ಸಿಕ್ಕಿರುವ ವರ್ತಮಾನ.
ವೈಲ್ಡ್ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಸಂತೋಷ್ ಅವರ ಬಂಧನವಾಗಿದ್ದು, ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಅನ್ನು ಅವರು ಹಾಕಿಕೊಂಡಿದ್ದರು. ಈ ಕುರಿತು ಶರತ್ ಎನ್ನುವವರು ದೂರು ನೀಡಿದ್ದರು. ಈ ಹಿನ್ನೆಲೆ ವರ್ತೂರು ಸಂತೋಷ್ ನನ್ನ ಬಂಧಿಸಲಾಗಿತ್ತು.