ಈ ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಯ ಹುಟ್ಟಿಗೆ ತಾಯಿ ಕಾರಣವಿರುತ್ತದೆ. ಮಾತೃತ್ವವು ಕೇವಲ ಮನುಷ್ಯರಿಗೆ ಮಾತ್ರವಲ್ಲ, ಆತ್ಮರಹಿತ ಜೀವಿಗಳಿಗೂ ವಿಶೇಷವಾಗಿದೆ. ತಾಯಿಗೆ ಗರ್ಭದಲ್ಲಿ ಅಪಾರ ಹೆರಿಗೆ ನೋವು ಬಂದರೂ ಆ ಮಗುವಿನ ಮೇಲಿನ ತಾಯಿಯ ಪ್ರೀತಿ ಅಪರಿಮಿತ. ಆದುದರಿಂದಲೇ ಈ ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಎಲ್ಲರೂ ಹೇಳುತ್ತಾರೆ.
ತಾಯಿ ಹಸುವೊಂದು ಇದನ್ನು ವಿಭಿನ್ನ ರೀತಿಯಲ್ಲಿ ಸಾದರಪಡಿಸಿದೆ. ನವಜಾತ ಶಿಶುವನ್ನು ಆಟೋದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ. ಅದರ ಹೆತ್ತಮ್ಮನನ್ನು ಸಂಭಾಳಿಸಲು ಅಲ್ಲಿದ್ದವರಿಗೆ ಯಾರಿಗೂ ಸಾಧ್ಯವಾಗಲಿಲ್ಲ. ಬಹುಶಃ ತಾಯಿ ಹಸುವಿಗೆ ಮಾತುಬಂದಿದ್ದರೆ ಸಿಂಹಕ್ಕಿಂತ ಜೋರಾಗಿಯೇ ಘರ್ಜಿಸುತ್ತಿತ್ತೇನೋ. ಆದರೆ ಏನೂ ಮಾಡಲಾಗದ ಅಸಹಾಯಕಳಾಗಿ ಕಣ್ಣೀರು ಹಾಕುತ್ತಾ ಚಲಿಸುತ್ತಿದ್ದ ಆಟೋ ಹಿಂದೆ ಆ ಮಹಾತಾಯಿ ಹಸು ಓಡಿದ್ದೇ ಓಡಿದ್ದು. ಈ ಮೂಲಕ ತಾಯಿ ಹಸು ಸುಮಾರು ಐದಾರು ಕಿಲೋ ಮೀಟರ್ ಓಡಿ ಓಡಿ ನೋಡುಗರನ್ನು ಮೂಕವಿಸ್ಮಯಗೊಳಿಸಿದೆ. ಈ ಕರುಣಾಜನಕ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ಬೆಳಕಿಗೆ ಬಂದಿದೆ.
ತಮಿಳುನಾಡಿನ ತಂಜಾವೂರು ಸೆಕ್ಕಾಡಿ ಮೂಲದ ಶಬರಿನಾಥನ್ ಎಂಬ ವ್ಯಕ್ತಿ ಆಟೋ ಚಾಲಕನಾಗಿ ಜೀವನ ಸಾಗಿಸುತ್ತಿದ್ದಾರೆ. ಇವರು ತಮ್ಮ ಮನೆಯಲ್ಲಿ ವೀರಲಕ್ಷ್ಮಿ ಎಂಬ ಹಸುವನ್ನು ಸಾಕಿದ್ದಾರೆ. ಎಂದಿನಂತೆ ಮೊನ್ನೆ ಸೋಮವಾರವೂ ಜಾನುವಾರುಗಳು ತೊಂಬನ್ ಗುಡಿ ಭಾಗದಲ್ಲಿ ಮೇವು ಮೇಯಲು ಹೋಗಿದ್ದವು. ಆದರೆ ಅದೇ ದಿನ ಸಂಜೆ ಆ ಹಸು ಕರುವಿಗೆ ಜನ್ಮ ನೀಡಿದೆ. ಆದರೆ ಬಹಳ ಹೊತ್ತಿನವರೆಗೆ ಹಸು ಬಾರದ ಹಿನ್ನೆಲೆಯಲ್ಲಿ ಹಸುವಿನ ಮಾಲೀಕ, ಆಟೋ ಚಾಲಕ ಹಲವೆಡೆ ಹುಡುಕಾಟ ನಡೆಸಿದಾಗ ಒಂದು ಸ್ಥಳದಲ್ಲಿ ತನ್ನ ಹಸುಗೂಸು ಜೊತೆಗೆ ಹಸು ಕಣ್ನಿಗೆ ಬಿದ್ದಿದೆ.
ಆಗ ಆಟೋ ಚಾಲಕ ಮಾಲೀಕ ಶಬರಿನಾಥನ್ ಕರುವನ್ನು ಆಟೋದಲ್ಲಿ ಹಾಕಿಕೊಂಡು ಮನೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ತಾಯಿ ಹಸು ತನ್ನ ಕರುವನ್ನು ಮಾತ್ರ ಬಿಟ್ಟಿರಲಾರದೆ ಆಟೋ ಹಿಂದೆಯೇ ಓಡೋಡಿಬಂದಿದೆ. ಮಾರ್ಗದುದ್ದಕ್ಕೂ ಆ ಪುಟ್ಟ ಕರುವಿಗೆ ತನ್ನ ತಾಯಿ ಪ್ರೀತಿಯ ಶಕ್ತಿಯನ್ನು ತುಂಬಿದ್ದಾಳೆ. ಒಟ್ಟು ಆಟೋ ಹಿಂದೆ 5 ಕಿಲೋಮೀಟರ್ ಓಡೋಡಿ ಬಂದಿದೆ ತಾಯಿ ಹಸು.
ಮಾಲೀಕ ಶಬರಿನಾಥನ್ಗೆ ದಾರಿ ಮಧ್ಯೆ ಜ್ಞಾನೋದಯವಾಗಿ ಹಸುವಿನ ನೋವು ಅರ್ಥಮಾಡಿಕೊಂಡು ಕರುವನ್ನು ಆಟೋದಿಂದ ಇಳಿಸಿ, ಅದರ ಜೊತೆ ಇರಲು ಬಿಟ್ಟಿದ್ದಾರೆ. ಕೂಡಲೇ ತಾಯಿ ಹಸು, ತನ್ನ ಕಂದನನ್ನು ತಬ್ಬಿ, ಸ್ವಲ್ಪ ಹೊತ್ತು ಹಾಲುಣಿಸಿದೆ. ಕರುವಿಗಾಗಿ ತಾಯಿ ಹಸುವಿನ ಪ್ರೀತಿಯನ್ನು ಕಂಡು ನೋಡುಗರು ಆರ್ದರಾಗಿದ್ದಾರೆ. ಅದಾದ ಮೇಲೆ ಶಬರಿನಾಥನ್ ಕೂಡ ಕರುವನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಹೋಗುವ ಬದಲು, ಒಟ್ಟಿಗೆ ತಾಯಿ ಹಸುವಿನ ಜೊತೆಗೆ ಮನೆಗೆ ತೆಗೆದುಕೊಂಡು ಬಂದಿದ್ದಾರೆ. ತಾಯಿಯ ಪ್ರೀತಿ ಸಕಲ ಜೀವಿಗಳಿಗೂ ಸಮಾನ ಎಂಬುದನ್ನು ಈ ಘಟನೆ ತೋರಿಸುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಸು-ಕರುಗಳ ನಡುವಿನ ಈ ಕರುಳಿನ ಕೂಗು ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.