SKDRDP ಯಲ್ಲಿ ಕೋಟ್ಯಾಂತರ ರೂ. ಕಳ್ಳತನ: ಕಚೇರಿ ಸಿಬ್ಬಂದಿ ಸೇರಿ 10 ಮಂದಿ ಬಂಧನ

ಶೇರ್ ಮಾಡಿ

ವಿಜಯದಶಮಿ ದಿನದಂದು ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಾಪೂರದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ (ಎಸ್‌ಕೆಡಿಆರ್‌ಪಿಡಿ) ಯೋಜನಾ ಕಚೇರಿಯಲ್ಲಿ ಆಗಿದ್ದ ಕೋಟ್ಯಾಂತರ ನಗದು ಕಳ್ಳತನ ಪ್ರಕರಣವನ್ನು ಭೇದಿಸಲಾಗಿದ್ದು, ಈ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸೇರಿದಂತೆ ಒಟ್ಟು 10 ಜನರನ್ನು ಬಂಧಿಸಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಹೇಳಿದರು.

ಇಲ್ಲಿಯ ವಿದ್ಯಾಗಿರಿಯ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಕೆಡಿಆರ್‌ಡಿಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿಯ ಕುಶಾಲಕುಮಾರ ಕೃಷ್ಣಾ ಸವಣೂರು (23), ನವಲಗುಂದದ ಕಳ್ಳಿಮಠ ಓಣಿಯ ಬಸವರಾಜ ಶೇಖಪ್ಪ ಬಾಬಜಿ (34), ಮಹಾಂತೇಶ ಲಕ್ಷ್ಮಣ ಹಿರಗಣ್ಣವರ (27) ಹಾಗೂ ನವಲಗುಂದದ ಜಿಲಾನಿ ಬವರಸಾಬ ಜಮಾದಾರ (25), ಪರಶುರಾಮ ಹನುಮಂತಪ್ಪ ನೀಲಪ್ಪಗೌಡ್ರ (34), ಭೋವಿ ಓಣಿಯ ರಂಗಪ್ಪ ನಾಗಪ್ಪ ಗುಡಾರದ (31), ಮಂಜುನಾಥ ಯಮನಪ್ಪ ಭೋವಿ(22), ಕುಂಬಾರ ಓಣಿಯ ಕಿರಣ ಶರಣಪ್ಪ ಕುಂಬಾರ, ಆರ್ಮಿ ಕಾಲನಿಯ ರಜಾಕ ಅಹ್ಮದ ಅಲ್ಲಾವುದ್ದೀನ ಮುಲ್ಲಾನವರ (31), ವಿದ್ಯಾರ್ಥಿ ಆಗಿರುವ ವಿರೇಶ ಸಿದ್ದಪ್ಪ ಚವಡಿ (20) ಬಂಧಿತರು. ಈ ಆರೋಪಿಗಳಿಂದ ಈವರೆಗೆ 79,89,870 ರೂ. ನಗದು, ಕೃತ್ಯಕ್ಕೆ ಬಳಸಿದ ಸ್ವಿಪ್ಟ ಡಿಸೈರ್ ಕಾರು, ಎರಡು ದ್ವಿಚಕ್ರ ವಾಹನ, ನಾಲ್ಕು ಮೊಬೆÊಲ್ ಸೇರಿದಂತೆ ಒಟ್ಟು 85,89,870 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಎಸ್‌ಕೆಡಿಆರ್‌ಪಿಡಿ ವತಿಯಿಂದ ದಿನನಿತ್ಯ ಸಂಗ್ರಹಿಸುತ್ತಿದ್ದ ಹಣವನ್ನು ಬ್ಯಾಂಕ್‌ಗೆ ಜಮೆ ಮಾಡಲಾಗುತ್ತದೆ. ಆದರೆ ವಿಜಯದಶಮಿ ಪ್ರಯುಕ್ತ ರಜೆ ಹಿನ್ನಲೆಯಲ್ಲಿ ಕಚೇರಿಯಲ್ಲಿಯೇ 1,24,48,087 ರೂ. ನಗದು ಹಣವನ್ನು ಇರಿಸಲಾಗಿತ್ತು. ಕಚೇರಿಯ ಭದ್ರತಾ ಕೊಠಡಿಯ ಭದ್ರತಾ ಲಾಕರ್‌ಗಳಲ್ಲಿ ಇರಿಸಲಾಗಿದ್ದ ಈ ಹಣವನ್ನು ಆಯುಧಗಳಿಂದ ಮೀಟಿ ಅದರಲ್ಲಿದ್ದ ಹಣವನ್ನು ಕಳವು ಮಾಡಲಾಗಿತ್ತು. ಈ ಕುರಿತಂತೆ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಅ.24 ರಂದು ದೂರು ದಾಖಲಾಗಿತ್ತು. ಈ ಕಳ್ಳತನ ಪ್ರಕರಣದ ತನಿಖೆಗಾಗಿ ಹು-ಧಾ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತ ರಾಜೀವ ಎಂ., ಧಾರವಾಡ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನೇತೃತ್ವದಲ್ಲಿ ವಿದ್ಯಾಗಿರಿ ಪೊಲೀಸ್ ಠಾಣೆಯ ಪಿಐ ಸಂಗಮೇಶ ಕಾಡದೇವರಮಠ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ಕಳ್ಳತನವಾದ ಒಂದು ವಾರದೊಳಗೆ ನಗದು ಸಮೇತ ಕೃತ್ಯ ಮಾಡಿದ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಈ ಕಳ್ಳತನ ಪ್ರಕರಣದಲ್ಲಿ ಎಸ್‌ಕೆಡಿಆರ್‌ಪಿಡಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರೇ ಪ್ರಮುಖ ಆರೋಪಿಗಳಾಗಿದ್ದು, ಉಳಿದ ಏಳು ಆರೋಪಿಗಳ ಪೈಕಿ ನಾಲ್ವರು ಅಪರಾಧ ಹಿನ್ನಲೆಯುಳ್ಳವರಾಗಿದ್ದಾರೆ. ಅದರಲ್ಲೂ ಪ್ರಮುಖ ಆರೋಪಿ ಆಗಿರುವ ಎಸ್‌ಕೆಡಿಆರ್‌ಪಿಡಿ ಕಚೇರಿಯ ಮ್ಯಾನೇಜರ್ ಕುಶಾಲಕುಮಾರ ಸವಣೂರು ಹೊರತುಪಡಿಸಿ ಉಳಿದೆಲ್ಲವರೂ ನವಲಗುಂದದವರೇ ಅನ್ನುವುದು ಗಮನಾರ್ಹ. ಸದ್ಯ 10 ಜನರನ್ನು ಬಂಧಿಸಲಾಗಿದ್ದು, ಈಗ ಸಿಕ್ಕಿರುವ ಹಣದ ಜತೆಗೆ ಉಳಿದ ಹಣವನ್ನೂ ಪತ್ತೆ ಹಚ್ಚುವ ಕಾರ್ಯ ಮುಂದುವರೆಸಲಾಗಿದೆ. ಇದಲ್ಲದೇ ಈ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ವಿದ್ಯಾಗಿರಿಯ ಪಿಐ ಸಂಗಮೇಶ ದಿಡಗಿನಾಳ, ಶಹರ ಠಾಣೆಯ ಪಿಐ ನಾಗೇಶ ಕಾಡದೇವರಮಠ, ಪಿಎಸ್‌ಐಗಳಾದ ಬಾಬಾ ಎಂ., ಪ್ರಮೋದ ಎಚ್.ಜಿ, ಎಂ.ಆರ್.ಮಲ್ಲಿಗವಾಡ, ಐ.ಐ.ಮದರಖಂಡಿ ಹಾಗೂ ಸಿಬ್ಬಂದಿಗಳಾದ ಈರಣ್ಣ ಬುರ್ಜಿ, ಗಿರೀಶ ಚಿಕ್ಕಮಠ, ನಾಗರಾಜ ಗುಡಿಮನಿ, ಎಂ.ಸಿ.ಮಂಕಣಿ, ಬಿ.ಎಂ.ಪಠಾತ, ಮಹಾಂತೇಶ ವೈ. ಎಂ., ಆನಂದ ಬಡಿಗೇರ, ಲಕ್ಷ್ಮಣ ಲಮಾಣಿ, ಗಿರೀಶ ಬಿದರಳ್ಳಿ, ವಿ.ಎಚ್.ಚವರಡ್ಡಿ, ಬಸವರಾಜ ಸವಣೂರ, ವಿ.ಎಸ್.ಕುದರಿ, ರಮೇಶ ಕೋತಂಬ್ರಿ, ಉಷಾ ಎಂ.ಎಚ್., ಸಿಓಪಿ ಕಾರ್ಯಾಲಯದ ಟೆಕ್ನಿಕಲ್ ಸೆಲ್ ವಿಭಾಗದ ಸಿಬ್ಬಂದಿಗಳಾದ ಎಂ.ಎಸ್.ಚಿಕ್ಕಮಠ, ಆರ್.ಕೆ.ಬಡಂಗಕರ, ಆರ್.ಎಸ್.ಗೋಮಪ್ಪನವರ ಒಳಗೊಂಡ ತಂಡವು ಈ ಪತ್ತೆ ಕಾರ್ಯ ಮಾಡಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಪೊಲೀಸ್ ಆಯುಕ್ತ ರಾಜೀವ ಎಂ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಗಿನಾಳ, ಶಹರ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ಕಾಡದೇವರಮಠ ಸೇರಿದಂತೆ ಹಲವರು ಇದ್ದರು.

Leave a Reply

error: Content is protected !!