ಖ್ಯಾತ ನಟಿಯೊಬ್ಬರು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಹಿಂದೆ ಅನುಮಾನದ ಹುತ್ತ ಬೆಳೆಯಲಾರಂಭಿಸಿದೆ ಎಂದು ವರದಿಯಾಗಿದೆ.
ಗುರುವಾರ(ನ.2 ರಂದು) ಬಾಂಗ್ಲಾದೇಶದ ನಟಿ ಹುಮೈರಾ ಹಿಮು(37) ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಆ್ಯಕ್ಟರ್ಸ್ ಇಕ್ವಿಟಿ ಗಿಲ್ಡ್ ನ ಅಧ್ಯಕ್ಷ ಮತ್ತು ನಟ ಅಹ್ಸಾನ್ ಹಬೀಬ್ ನಾಸಿಮ್ ಹೇಳಿದ್ದಾರೆ.
ಹುಮೈರಾ ಅವರ ದೇಹ ಅವರ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದು, ಅವರನ್ನು ಉತ್ತರ ಅಧುನಿಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಆದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ವೈದ್ಯರು ದೇಹವನ್ನು ಪರೀಕ್ಷಿಸಿದ ವೇಳೆ ನಟಿಯ ಕುತ್ತಿಗೆಯಲ್ಲಿ ಮಸುಕಾದ ಗುರುತೊಂದು ಪತ್ತೆಯಾಗಿದ್ದು, ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಹಾಜರಿದ್ದ ಹುಮೈರಾ ಹಿಮು ಅವರ ಸ್ನೇಹಿತ ಪೊಲೀಸರು ಬರುವ ಮೊದಲು ಅಲ್ಲಿಂದ ಹೊರಟು ಹೋಗಿದ್ದು, ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಸದ್ಯ ಪೊಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.
2006 ರಲ್ಲಿ ರಂಗಭೂಮಿಯಿಂದ ತನ್ನ ವೃತ್ತಿ ಬದುಕನ್ನು ಆರಂಭಿಸಿದ ಅವರು, ಚಾಯಾಬಿತಿ, ಬರಿ ಬರಿ ಸಾರಿ ಸಾರಿ, ಹೌಸ್‌ಫುಲ್ ಮತ್ತು ಗುಲ್ಶನ್ ಅವೆನ್ಯೂ ಮುಂತಾದ ಧಾರಾವಾಹಿಯಲ್ಲಿ ಮಿಂಚಿದ್ದರು.
ಮೊರ್ಷೆದುಲ್ ಇಸ್ಲಾಂ ನಿರ್ದೇಶಿಸಿದ ಅಮರ್ ಬೋಂಧು ರಾಶೆಡ್ ನಲ್ಲಿನ ಪಾತ್ರಕ್ಕಾಗಿ ಅವರಿಗೆ ಹೆಚ್ಚು ಮನ್ನಣೆ ಸಿಕ್ಕಿತ್ತು.