ಬಾವಿ ನಿರ್ಮಾಣದ ವೇಳೆ ಶ್ರೀ ಗೋಪಾಲಕೃಷ್ಣ ದೇವರ ವಿಗ್ರಹ ಪತ್ತೆ

ಶೇರ್ ಮಾಡಿ

ತೆಕ್ಕಾರು ಗ್ರಾಮದ ಭಟ್ರಭೈಲು ದೇವರ ಗುಡ್ಡೆಯಲ್ಲಿ ಬಾವಿ ನಿರ್ಮಾಣ ಕಾರ್ಯದ ವೇಳೆ 12 ನೇ ಶತಮಾನದೆನ್ನಲಾದ ಶ್ರೀ ಗೋಪಾಲಕೃಷ್ಣ ದೇವರ ಭಗ್ನ ವಿಗ್ರಹ ಹಾಗೂ ಇನ್ನಿತರ ಪರಿಕರಗಳು ಪತ್ತೆಯಾಗಿದೆ.

ದೇವಾಲಯವಿತ್ತೆನ್ನಲಾದ ದೇವರಗುಡ್ಡೆ ಭೂಮಿಯು ಕಾರಣಾಂತರಗಳಿಂದ ವ್ಯಕ್ತಿಯೋರ್ವರ ಸ್ವಾಧೀನದಲ್ಲಿದ್ದು, ಅದನ್ನು ಕಾನೂನುಬದ್ಧವಾಗಿ ದೇವಾಲಯಕ್ಕೆ ಕಾಯ್ದಿರಿಸಲಾಗಿದೆ. ದೇವಾಲಯದ ನಿರ್ಮಾಣಕ್ಕೆ ಬೇಕಾದ ಉಳಿದ ಭೂಮಿಯನ್ನು ಬೆಳ್ತಂಗಡಿ ಶಾಸಕರ ಮುತುವರ್ಜಿಯಿಂದ ಕ್ರಯವರಿಸಿಕೊಂಡು ದೇವಾಲಯ ನಿರ್ಮಾಣ ಕಾರ್ಯಕ್ಕೆ ಇಲ್ಲಿ ಚಾಲನೆ ನೀಡಲಾಗಿತ್ತು. ಈ ಸಂಬಂಧ ಕಳೆದ 5 ದಿನಗಳ ಹಿಂದೆ ಸ್ಥಳದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗಿತ್ತು. ಈ ಸಮಯದಲ್ಲಿ ಜ್ಯೋತಿಷಿ ವೆಂಕಟರಮಣ ಭಟ್ ಮಾಡವುರವರು ದೇವಾಲಯಕ್ಕೆ ಅಗತ್ಯವಿರುವ ಬಾವಿಯನ್ನು ನಿರ್ಮಿಸಲು ಸೂಚಿಸಿದ್ದರು. ಹಾಗೂ ಅದಕ್ಕೆ ಸ್ಥಳವನ್ನು ಗುರುತಿಸಿದ್ದರು. ಅದರಂತೆ ರವಿವಾರ ಬಾವಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದಾಗ ಸುಮಾರು 15 ಅಡಿ ಆಳದಲ್ಲಿ ಶ್ರೀ ಗೋಪಾಲಕೃಷ್ಣ ದೇವರ ವಿಗ್ರಹ, ದೀಪದ ಕಲ್ಲು, ದೇವರ ಕೊಳಲು, ದೇವರ ಕೋಲು, ದೇವಾಲಯದ ಅಡಿಪಾಯದ ಕುರುಹು, ಪತ್ತೆಯಾಗಿದ್ದು, ಸ್ಥಳದಲ್ಲಿ ದೇವಾಲಯದ ಅಸ್ತಿತ್ವ ಇತ್ತೆನ್ನಲು ಪೂರಕ ದಾಖಲೆಗಳು ಪ್ರಾಪ್ತವಾಗಿದೆ. ಮಾತ್ರವಲ್ಲದೆ ದೇವಾಲಯದ ಸೊತ್ತುಗಳೆನ್ನಲಾದ ಬಹಳಷ್ಟು ಶಿಲಾಮಯ ವಸ್ತುಗಳು ನೇತ್ರಾವತಿ ನದಿಗೆ ಇಳಿಯುವ ಜಾಗದಲ್ಲಿ ಕಾಣಿಸಿದೆ ಎಂದು ತಿಳಿದುಬಂದಿದೆ.

ಈ ಸಂಧರ್ಭದಲ್ಲಿ ಸ್ಥಳೀಯರಾದ ಲಕ್ಷ್ಮಣ ಚೆನ್ನಪ್ಪ, ನಾಗಭೂಷಣ ಬಾಗ್ಲೋಡಿ, ತಿಮ್ಮಪ್ಪ ಪೂಜಾರಿ, ತುಕರಾಮ ನಾಯಕ್, ಅನಂತ ಪ್ರಸಾದ್ ನೈತಡ್ಕ, ಸುರೇಶ್, ಸತೀಶ್, ಮಂಜುನಾಥ ಸಾಲಿಯಾನ್, ಪ್ರವೀಣ್ ರೈ, ಸದಾನಂದ ನಾಯಕ್, ಪ್ರಕಾಶ್ ನಾಯಕ್, ಅಣ್ಣಿ ಪೂಜಾರಿ, ಗಿರಿಧರ ನಾಯಕ್, ಗೋಪಾಲ ನಾಯಕ್, ರವೀಂದ್ರ ಗೌಡ, ನವೀನ್ ರೈ, ತಿಲಕ್ ರಾಜ್, ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.

Leave a Reply

error: Content is protected !!