ಧರ್ಮಸ್ಥಳ ಗ್ರಾಮದ ನೇರ್ತನೆ ಪ್ರದೇಶದಲ್ಲಿ ಸೋಮವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿದ್ದು ಕೃಷಿಗೆ ಹಾನಿಯುಂಟು ಮಾಡಿವೆ. ಇಲ್ಲಿನ ನಿವಾಸಿ ಶ್ರೀನಿವಾಸ ಅವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಐದು ತೆಂಗಿನ ಮರಗಳನ್ನು ಉರುಳಿಸಿದ್ದು ಬಾಳೆಗಿಡಗಳನ್ನು ನಾಶಗೊಳಿಸಿದೆ.
ಇಲ್ಲಿಯೇ ಸಮೀಪದ ಸ್ಟಾನಿ, ವಿಲ್ಸನ್ ಅವರ ತೋಟಗಳಿಗೂ ಆನೆಗಳ ಹಿಂಡು ನುಗ್ಗಿವೆ. ಇದನ್ನು ಗಮನಿಸಿದ ಮನೆಯವರು ಪಟಾಕಿ ಸಿಡಿಸಿ ಓಡಿಸುವ ಕಾರ್ಯ ಮಾಡಿದ್ದಾರೆ.
ಮರಿಯಾನೆ ಸಹಿತ ಮೂರು ಆನೆಗಳು ಈ ಹಿಂಡಿನಲ್ಲಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ತಿಂಗಳ ಹಿಂದೆ ಆನೆಗಳ ಹಿಂಡು ಇಲ್ಲಿ ವ್ಯಾಪಕವಾಗಿ ಕೃಷಿಗೆ ಹಾನಿಯುಂಟು ಮಾಡಿದ್ದವು. ಇದೀಗ ಮತ್ತೆ ಆನೆಗಳ ಹಿಂಡು ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಕಾಡಾನೆಗಳು ರಾತ್ರಿಯ ವೇಳೆ ಮುಖ್ಯ ರಸ್ತೆಯ ಬದಿಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದು ಜನರು ರಾತ್ರಿ ಓಡಾಟ ನಡೆಸಲು ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ.