ಕೊಯಿಲ ಗ್ರಾಮದ ಗಂಡಿಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ, ಅಲಂಕಾರು ಗ್ರಾಮದ ತೀರ್ಥಜಾಲು ನಿವಾಸಿ ಜನಾರ್ದನ ಗೌಡ(59ವ.) ಅವರು ನ.7ರಂದು ತಡರಾತ್ರಿ ಹೃದಯಾಘಾತದಿಂದ ನಿಧನರಾದರು.
ಜನಾರ್ದನ ಗೌಡ ಅವರು ನ.7ರಂದು ಮಧ್ಯಾಹ್ನದ ತನಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಹೋಗಿ ಸಂಜೆ ಮನೆಗೆ ಬಂದಿದ್ದರು. ರಾತ್ರಿ ಅವರಿಗೆ ಎದೆನೋವು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಮನೆಯವರು ತಕ್ಷಣ ಉಪ್ಪಿನಂಗಡಿಯ ಆಸ್ಪತ್ರೆಗೆ ಕರೆತಂದರಾದರು ಆ ವೇಳೆಗಾಗಲೇ ಜನಾರ್ದನ ಗೌಡರವರು ವೃತಪಟ್ಟಿದ್ದರು ಎಂದು ವರದಿಯಾಗಿದೆ.
ಜನಾರ್ದನ ಗೌಡ ಅವರು ನರಿಮೊಗರು ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ ಬಳಿಕ ಕುಂಡಾಜೆ, ಕಳಪ್ಪಾರು, ಆಲಂಕಾರು ಶಾಲೆಗಳಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ಎರಡು ವರ್ಷದ ಹಿಂದೆ ಮುಖ್ಯಶಿಕ್ಷಕರಾಗಿ ಭಡ್ತಿ ಪಡೆದು ಗಂಡಿಬಾಗಿಲು ಶಾಲೆಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ ನರೇಗಾ ಯೋಜನೆಯ ಗ್ರಾಮ ಸಂಪನ್ಮೂಲ ವ್ಯಕ್ತಿ ಜಯಮಣಿ, ಪುತ್ರಿ ಹರ್ಷಿತಾ ಹಾಗೂ ವಿದೇಶದಲ್ಲಿ ಉದ್ಯೋಗದಲ್ಲಿರುವ ಪುತ್ರ ಚರಣ್ ಕುಮಾರ್ ಅವರನ್ನು ಅಗಲಿದ್ದಾರೆ.
ಪ್ರತಿಭಾ ಕಾರಂಜಿ ಮುಂದೂಡಿಕೆ:
ಜನಾರ್ದನ ಗೌಡ ರವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ನ.8ರಂದು ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಬೇಕಾಗಿದ್ದ ರಾಮಕುಂಜ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ನ.9ಕ್ಕೆ ಮುಂದೂಡಲಾಗಿದೆ.