ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ತಾಲೂಕಿನ ಅಮ್ಟಾಡಿ ಗ್ರಾಮದ ನಲ್ಕೆಮಾರ್ ಎಂಬಲ್ಲಿರುವ ಗೂಡಂಗಡಿ ಮೇಲೆ ಮರ ಬಿದ್ದು ಹಾನಿಯಾಗಿದೆ.
ಬಸ್ ನಿಲ್ದಾಣದ ಬಳಿಯಿರುವ ಸುಂದರ ಎಂಬವರ ಗೂಡಂಗಡಿ ಮೇಲೆ ಮರ ಬಿದ್ದು ಗೂಡಂಗಡಿ ಸಂಪೂರ್ಣ ಜಖಂಗೊಂಡಿದೆ. ಜೊತೆಗೆ ಬಸ್ ತಂಗುದಾಣ ಕೂಡ ಹಾನಿಯಾಗಿದೆ. ಬಸ್ ನಿಲ್ದಾಣದ ಹಂಚು ಪುಡಿಯಾಗಿದೆ.
ಅದೃಷ್ಟವಶಾತ್ ರಾತ್ರಿ ವೇಳೆ ಆಗಿದ್ದರಿಂದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಯಾರು ಇರದಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಮ್ಟಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ್ ಕುಮಾರ್ ಹಾಗೂ ಸ್ಥಳೀಯರ ನೆರವಿನಿಂದ ಕೂಡಲೇ ಮರವನ್ನು ಕಡಿದು ತೆರವುಗೊಳಿಸಿದರು.