ರಾಜ್ಯದಲ್ಲಿ ಕಳೆದ ಕೆಲವು ತಿಂಗಳಿನಿಂದ ಭಾರೀ ಚರ್ಚೆಗೆ ಕಾರಣವಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇದೀಗ ಕೊನೆಗೂ ನೇಮಕವಾಗಿದೆ. ಶಿಕಾರಿಪುರ ಶಾಸಕ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರಾವಧಿ ಮುಗಿದರೂ ಈ ಸ್ಥಾನಕ್ಕೆ ಹೊಸ ನೇಮಕಾತಿ ಆಗಿರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಬಳಿಕ ಹೊಸ ನೇಮಕಾತಿಯತ್ತ ಬಿಜೆಪಿ ವರಿಷ್ಠರು ಮನ ಮಾಡಿರಲಿಲ್ಲ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಾಂದ್ಲಾಜೆ, ವಿ.ಸೋಮಣ್ಣ, ಸಿ.ಟಿ ರವಿ, ಆರ್.ಅಶೋಕ್ ಮುಂತಾದವರ ಹೆಸರು ಕೇಳಿಬಂದಿತ್ತು. ಆದರೆ ಕೊನೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದ ಬಿ.ವೈ ವಿಜಯೇಂದ್ರ ಅವರ ನೇಮಕವಾಗಿದೆ. ತಕ್ಷಣದಿಂದ ಬರುವಂತೆ ನೇಮಕ ಮಾಡಲಾಗಿದೆ.