
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರ ಏಕೈಕ ಪುತ್ರಿ ಹವ್ವಾ ನಸೀಮ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಡಕ್ಕೆ ಧುಮುಕಿದ್ದಾರೆ. ಯು.ಟಿ. ಖಾದರ್ ಅವರ ಸ್ವಕ್ಷೇತ್ರ ಮಂಗಳೂರು (ಉಳ್ಳಾಲ)ದ ದೇರಳಕಟ್ಟೆಯಲ್ಲಿ ಯು.ಟಿ.ಫರೀದ್ ಫೌಂಡೇಶನ್ ಆಶ್ರಯದಲ್ಲಿ ಭಾನುವಾರ ನಡೆದ ಸೌಹಾರ್ದ ಕ್ರೀಡಾಕೂಟದಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ನಡೆದಿದ್ದು, ಈ ವೇಳೆ ವೇದಿಕೆಯಲ್ಲಿ ಹವ್ವಾ ನಸೀಮ ಸದಸ್ಯತ್ವ ಅರ್ಜಿಗೆ ಸಹಿ ಹಾಕಿ ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ಖಾದರ್ ಸ್ಪೀಕರ್ ಆಗಿರುವುದರಿಂದ ಈ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಆದರೆ ಖಾದರ್ ಅವರ ಆಪ್ತ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಪುತ್ರಿ ಹವ್ವಾ ಪಕ್ಷ ಸೇರಿದ್ದಾರೆ.
ಪ್ರಸ್ತುತ ಹವ್ವಾ ನಸೀಮ ಅವರು ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಸೈಕಾಲಜಿ ವಿಷಯದಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ನಡೆಸುತ್ತಿದ್ದಾರೆ. ಉತ್ತಮ ವಾಗ್ಮಿಯೂ ಆಗಿರುವ ಹವ್ವಾ, ಕಾಂಗ್ರೆಸ್ ಪಕ್ಷ ಸೇರಿರುವುದು ಕುತೂಹಲಕ್ಕೆ ಕಾರಣವಾಗಿದೆ.
ದೇರಳಕಟ್ಟೆ ಕಣಚೂರು ಮೈದಾನದಲ್ಲಿ ನಡೆದ ಈ ‘ಸೌಹಾರ್ದ ಕ್ರೀಡಾಕೂಟ’ವನ್ನು ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹ್ಮಾನ್ ಉದ್ಘಾಟಿಸಿದರು. ಮೂಡ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ದ.ಕ. ಜಿಲ್ಲಾ ಕಾಂಗ್ರೆಸ್ ಸದಸ್ಯ ಸುರೇಶ್ ಭಟ್ನಗರ, ಉಪಾಧ್ಯಕ್ಷ ದಿನೇಶ್ ರೈ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಹಿರಿಯರಾದ ಬಾಬು ಸುವರ್ಣ, ಹರ್ಷರಾಜ್ ಮುದ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಮತ್ತಿತರರು ಹಾಜರಿದ್ದರು.


