ಕೇರಳ ಗಡಿಯಲ್ಲಿ ಪೊಲೀಸ್, ನಕ್ಸಲರ ನಡುವೆ ಗುಂಡಿನ ಚಕಮಕಿ;ಹೈ ಅಲರ್ಟ್

ಶೇರ್ ಮಾಡಿ

ಕೊಡಗು-ಕೇರಳ ಗಡಿಯಲ್ಲಿ ಸೋಮವಾರ ನಕ್ಸಲ್ ಶಿಬಿರದ ಬಳಿ ನಕ್ಸಲೀಯರು ಮತ್ತು ಕೇರಳದ ನಕ್ಸಲ್ ನಿಗ್ರಹ ಪಡೆ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ಕಾಳಗದಲ್ಲಿ ಓರ್ವ ನಕ್ಸಲ್ ಗಾಯಗೊಂಡಿದ್ದಾನೆ. ಘಟನೆ ಬಳಿಕ ನಕ್ಸಲರೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನು ಗಾಯಗೊಂಡ ನಕ್ಸಲ್ ಚಿಕಿತ್ಸೆಗಾಗಿ ಅಥವಾ ರಕ್ಷಣೆಗಾಗಿ ಕೊಡಗು ಜಿಲ್ಲೆಯನ್ನು ಪ್ರವೇಶಿಸುವ ಸಾಧ್ಯತೆಗಳಿರುವುದರಿಂದ ಜಿಲ್ಲಾ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.

ಘಟನೆಯ ನಂತರ ಘಟನಾ ಸ್ಥಳದಲ್ಲಿ ರಕ್ತದ ಕಲೆಗಳು ಕಂಡುಬಂದಿವೆ. ನಕ್ಸಲರಲ್ಲಿ ಒಬ್ಬರು ಗಾಯಗೊಂಡಿರಬಹುದು ಎಂದು ಇದರಿಂದ ಪೊಲೀಸರು ಶಂಕಿಸಿದ್ದಾರೆ. ಸ್ಥಳದಿಂದ ಮೂರು ರೈಫಲ್‌ಗಳು, ಒಂದು ಲ್ಯಾಪ್‌ಟಾಪ್, ನಾಲ್ಕು ಮೊಬೈಲ್ ಫೋನ್‌ಗಳು ಮತ್ತು ಎಂಟು ಟೆಂಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂಬತ್ತು ನಕ್ಸಲೀಯರು ಇದ್ದಿರಬಹುದು ಎಂದು ಅಂದಾಜಿಸಲಾಗಿದೆ. ನಕ್ಸಲೀಯರು ‘ಕಬಿನಿ’ ಗುಂಪಿನ ಸದಸ್ಯರಾಗಿದ್ದು, ಮೊಯ್ದೀನ್ ಎಂಬ ವ್ಯಕ್ತಿಯ ನೇತೃತ್ವದಲ್ಲಿ ತಂಗಿದ್ದರು ಎಂದು ಮೂಲಗಳು ತಿಳಿಸಿವೆ.

ಘಟನೆಯ ನಂತರ ರಾಜ್ಯದ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಮಂಗಳವಾರ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭೇಟಿ ನೀಡಿದ್ದಾರೆ. ಆಸ್ಪತ್ರೆ, ಮೆಡಿಕಲ್ ಶಾಪ್ ಗಳ ಮೇಲೆ ಜಿಲ್ಲಾ ಪೊಲೀಸರು ಕಣ್ಣಿಟ್ಟಿದ್ದಾರೆ. ನಕ್ಸಲೀಯರನ್ನು ಬೆಂಬಲಿಸುವ ಕೇರಳದ ಜನರು ವಾಹನಗಳಲ್ಲಿ ಮೈಸೂರು ಅಥವಾ ಇತರ ದೂರದ ಸ್ಥಳಗಳಿಗೆ ತೆರಳಲು ಸಹಾಯ ಮಾಡುತ್ತಿರುವ ಶಂಕೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊಡಗಿನ 4-5 ಕಿ.ಮೀ ದೂರದಲ್ಲಷ್ಟೇ ಗುಂಡಿನ ಚಕಮಕಿ ನಡೆದಿದ್ದು, ನಕ್ಸಲರು ಕೇರಳ ಅರಣ್ಯ ಪ್ರದೇಶದಿಂದ ಕೊಡಗನ್ನು ಪ್ರವೇಶಿಸುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದ್ದರಿಂದ ಜಿಲ್ಲೆಯ ಚೆಕ್ ಪೋಸ್ಟ್ ಗಳಲ್ಲಿ ಹೆಚ್ಚುವರಿಯಾಗಿ ಜಿಲ್ಲಾ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗಿದ್ದು, ಎಲ್ಲಾ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಪೊಲೀಸರನ್ನು ನಿಯೋಜಿಸಿ ನಿಗಾ ಇರಿಸಲಾಗಿದೆ.

ಕೇರಳ ಪೊಲೀಸರು ನವೆಂಬರ್ 7 ರಂದು ಕೇರಳದ ವಯನಾಡಿನಲ್ಲಿ ಇಬ್ಬರು ಶಂಕಿತ ನಕ್ಸಲೀಯರಾದ ಶ್ರೀಮತಿ ಅಲಿಯಾಸ್ ಉನ್ನಿಮಯ ಮತ್ತು ಚಂದ್ರು ಅವರನ್ನು ಬಂಧಿಸಿದ್ದರು.

Leave a Reply

error: Content is protected !!