ಪುತ್ರನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಮೃತ ದುರ್ದೈವಿ ಪುತ್ರನನ್ನು ದೀಪಕ್ ನಿಶಾದ್ ಹಾಗೂ ಆರೋಪಿ ತಂದೆಯನ್ನು ಗಣೇಶ್ ಪ್ರಸಾದ್ ಎಂದು ಗುರುತಿಸಲಾಗಿದೆ.
ಭಾನುವಾರ ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವೆ ಫೈನಲ್ ಕ್ರಿಕೆಟ್ ಮ್ಯಾಚ್ ಇತ್ತು. ಈ ಪಂದ್ಯವನ್ನು ಗಣೇಶ್ ಪ್ರಸಾದ್ ನೋಡುತ್ತಿದ್ದರು. ಈ ವೇಳೆ ಮಗ ಟಿವಿ ಆಫ್ ಮಾಡಿದ್ದಾನೆ. ಇದರಿಂದ ತಂದೆ ಸಿಟ್ಟಿಗೆದ್ದು ಗಣೇಶ್ ಈ ಕೃತ್ಯ ಎಸಗಿದ್ದಾನೆ.
ಟಿವಿ ಆಫ್ ಮಾಡಿದ್ದು ಏಕೆ..?:
ಟಿವಿ ನೋಡುತ್ತಿದ್ದ ತಂದೆಯ ಬಳಿ ಮಗ ಅಡುಗೆ ಮಾಡುವಂತೆ ಹೇಳಿದ್ದಾನೆ. ಬೇಗ ಊಟ ಮಾಡಿ ಆಮೇಲೆ ಟಿವಿ ನೋಡು ಎಂದು ಮಗ ತಂದೆಗೆ ಒತ್ತಾಯಿಸಿದ್ದಾನೆ. ಆದರೆ ಗಣೇಶ್ ಮಗನ ಮಾತಿಗೆ ಕ್ಯಾರೇ ಎಂದಿಲ್ಲ. ಹೀಗಾಗಿ ತಂದೆಯ ಗಮನವನ್ನು ಬೇರೆ ಕಡೆ ಸೆಳೆಯುವ ಸಲುವಾಗಿ ಮಗ ಟಿವಿಯನ್ನೇ ಆಫ್ ಮಾಡಿದ್ದಾನೆ. ಪರಿಣಾಮ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಈ ಮಾತಿನ ಚಕಮಕಿ ಹೊಡೆದಾಡುವ ಮಟ್ಟಿಗೆ ತಲುಪಿದ್ದು, ಎಲೆಕ್ಟ್ರಿಕ್ ಕೇಬಲ್ ವೈರ್ ತೆಗೆದುಕೊಂಡು ಮಗನ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಘಟನೆಯ ಬಳಿಕ ಗಣೇಶ್ ಪ್ರಸಾದ್ ಸ್ಥಳದಿಂದ ಪಾರಾರಿಯಾಗಿದ್ದಾನೆ. ಬಳಿಕ ಕಾನ್ಪುರ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಚಾಕೇರಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಬ್ರಿಜ್ ನಾರಾಯಣ್ ಸಿಂಗ್ ಪ್ರತಿಕ್ರಿಯಿಸಿ, ದೀಪಕ್ ಮತ್ತು ಗಣೇಶ್ ಪ್ರಸಾದ್ ನಡುವೆ ಕುಡಿತದ ಬಗ್ಗೆ ಆಗಾಗ್ಗೆ ವಾದಗಳು ನಡೆಯುತ್ತಿದ್ದವು. ಆದರೆ ಇಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸುವ ವಿವಾದವೇ ಕೊಲೆಗೆ ಕಾರಣ ಎಂದು ತಿಳಿಸಿದ್ದಾರೆ. ಆರೋಪಿಯನ್ನು ಕಸ್ಟಡಿಗೆ ಒಪ್ಪಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವಿವರಿಸಿದರು.