ಈ ಹಿಂದೆ ಪರೀಕ್ಷೆ ಬರೆಯಲು ಹೋಗಿದ್ದಾಗ ಅಳುತ್ತಿದ್ದ ಪುಟ್ಟ ಕಂದಮ್ಮನನ್ನ ಮಹಿಳಾ ಪೊಲೀಸ್ ಸಮಾಧಾನ ಮಾಡಿದ್ದ ಸುದ್ದಿಯನ್ನು ಓದಿದ್ದೇವೆ. ಇದೀಗ ಅಂಥದ್ದೇ ಮನಸ್ಸಿಗೆ ಮುಟ್ಟುವಂತಹ ಘಟನೆಯೊಂದು ಕೇರಳದಲ್ಲಿ ನಡೆದಿದೆ.
ಕೇರಳದ ಕೊಚ್ಚಿಯಲ್ಲಿ ಈ ಘಟನೆ ನಡೆದಿದ್ದು, ನಾಲ್ಕು ತಿಂಗಳ ಮಗುವಿಗೆ ಸ್ವತಃ ತಾವೇ ಎದೆ ಹಾಲುಣಿಸುವ ಮೂಲಕ ತಾಯಿ ಪ್ರೀತಿ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಮಹಿಳಾ ಪೊಲೀಸ್ ಅಧಿಕಾರಿಗೆ ಇಲಾಖೆ ಮತ್ತು ಸಾರ್ವಜನಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಘಟನೆ ಏನು..?:
ಬಿಹಾರ ಮೂಲದ ಮಗುವಿನ ತಾಯಿಗೆ ಶಸ್ತ್ರಚಿಕಿತ್ಸೆಯೊಂದು ನಡೆದಿತ್ತು. ಆ ಬಳಿಕ ಆಕೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಆ ತಾಯಿಯನ್ನು ಎರ್ನಾಕುಲಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪುಟ್ಟ ಕಂದಮ್ಮನ ಆರೈಕೆಗೆ ಎರ್ನಾಕುಲಂ ವನಿತಾ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಆರ್ಯ ಅವರು ಮುಂದಾಗಿದ್ದಾರೆ. ಸದ್ಯ ಆರ್ಯ ಅವರ ಈ ಕಾರ್ಯಕ್ಕೆ ಸಹ ಅಧಿಕಾರಿಗಳು ಮತ್ತು ಸಾರ್ವಜನಿಕರು ಭೇಷ್ ಎಂದಿದ್ದಾರೆ.