ಇನ್ನು ಮುಂದೆ ಬೇಕಾಬಿಟ್ಟಿ ಸಿಮ್‌ ಕಾರ್ಡ್‌ ಖರೀದಿಸುವಂತಿಲ್ಲ – ಡಿ.1ರಿಂದ ಜಾರಿಯಾಗಲಿರುವ ಕಠಿಣ ನಿಯಮಗಳು ಏನು?

ಶೇರ್ ಮಾಡಿ

ನೀವು ಹೊಸ ಸಿಮ್‌ ಕಾರ್ಡ್‌(Sim Card) ಖರೀದಿ ಮಾಡುತ್ತೀರಾ? ಹಾಗಾದ್ರೆ ಡಿ.1 ರಿಂದ ಕೆಲ ಕಠಿಣ ನಿಯಮಗಳನ್ನು ಪಾಲಿಸಬೇಕು. ಗ್ರಾಹಕರು ಮಾತ್ರವಲ್ಲ ಸಿಮ್‌ ವಿತರಿಸುವ ಡೀಲರ್‌ಗಳು ಸಹ ಕಠಿಣ ನಿಯಮಗಳನ್ನು ಪಾಲಿಸಲೇಬೇಕು. ನಿಯಮ ಪಾಲಿಸದೇ ಉಲ್ಲಂಘನೆ ಮಾಡಿದರೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಗಂಭೀರ ಪ್ರಕರಣವಾದಲ್ಲಿ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಬಹುತೇಕ ಸೈಬರ್ ಅಪರಾಧಗಳು ಮತ್ತು ದೇಶವಿರೋಧಿ ಕೃತ್ಯಗಳನ್ನು ಸುಳ್ಳು ದಾಖಲೆಗಳೊಂದಿಗೆ ಜೋಡಿಸಲಾದ ಮೊಬೈಲ್ ಸಂಖ್ಯೆಗಳನ್ನು ಬಳಸುತ್ತಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಕಠಿಣ ಕ್ರಮ ಕೈಗೊಂಡಿದೆ.

ಹೊಸ ನಿಯಮಗಳು ಏನು?
ವ್ಯಾಪಾರಸ್ಥರು/ ಕಂಪನಿಗಳಿಗೆ ಮಾತ್ರ ಸಿಮ್ ಕಾರ್ಡ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ. ಸಾಮಾನ್ಯ ಬಳಕೆದಾರರು ಒಂದು ಗುರುತಿನಿಂದ ಗರಿಷ್ಠ 9 ಸಿಮ್‌ಗಳನ್ನು ಮಾತ್ರ ಪಡೆಯಬಹುದು.

ಸಿಮ್‌ ಕಾರ್ಡ್‌ ರದ್ದು/ ನಿಷ್ಕ್ರಿಯಗೊಳಿಸಿದ 90 ದಿನಗಳ ನಂತರ ಆ ಸಂಖ್ಯೆಯನ್ನು ಬೇರೆ ಗ್ರಾಹಕರಿಗೆ ನೀಡಲಾಗುತ್ತದೆ.

ಸಿಮ್ ಕಾರ್ಡ್‌ಗಳನ್ನು ಖರೀದಿಸುವ ಗ್ರಾಹಕರು ತಮ್ಮ ಆಧಾರ್ ಮತ್ತು ಜನಸಂಖ್ಯಾ ಡೇಟಾವನ್ನು ಸಲ್ಲಿಸಬೇಕಾಗುತ್ತದೆ.

ನೋಂದಾಯಿಸದ ಡೀಲರ್‌ಗಳ ಮೂಲಕ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಿದರೆ ಹೊಸ ನಿಯಮಗಳ ಪ್ರಕಾರ ಟೆಲಿಕಾಂ ಆಪರೇಟರ್‌ಗಳಿಗೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

ಎಲ್ಲಾ ಸಿಮ್‌ ಕಾರ್ಡ್‌ ಡೀಲರ್‌ಗಳು ಕಡ್ಡಾಯವಾಗಿ ನವೆಂಬರ್ ಅಂತ್ಯದೊಳಗೆ ದಾಖಲೆಗಳನ್ನು ಸಲ್ಲಿಸಬೇಕು ಮತ್ತು ನೋಂದಾಯಿಸಿಕೊಳ್ಳಬೇಕು. ಸಿಮ್‌ ಕಾರ್ಡ್‌ ಡೀಲರ್‌ಗಳು ಅಥವಾ ಚಿಲ್ಲರೆ ವ್ಯಾಪಾರಿಯು ನೋಂದಣಿಗಾಗಿ ಕಾರ್ಪೊರೇಟ್ ಗುರುತಿನ ಸಂಖ್ಯೆ, ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಗುರುತಿನ ಸಂಖ್ಯೆ ಅಥವಾ ವ್ಯಾಪಾರ ಪರವಾನಗಿ, ಆಧಾರ್ ಅಥವಾ ಪಾಸ್‌ಪೋರ್ಟ್, ಪಾನ್‌, ಸರಕು ಮತ್ತು ಸೇವಾ ತೆರಿಗೆ ನೋಂದಣಿ ಪ್ರಮಾಣಪತ್ರ ಇತ್ಯಾದಿಗಳನ್ನು ಒದಗಿಸಬೇಕಾಗುತ್ತದೆ.

ಸಿಮ್‌ ಡೀಲರ್‌ಗಳು ನಕಲಿ ದಾಖಲೆಗಳನ್ನು ಸಲ್ಲಿಸಿದರೆ, ಟೆಲಿಕಾಂ ಆಪರೇಟರ್‌ಗಳು ಅವರ ಐಡಿಯನ್ನು ನಿರ್ಬಂಧಿಸಬೇಕು. ಅಷ್ಟೇ ಅಲ್ಲದೇ ಸಿಮ್‌ ಡೀಲರ್‌ನಿಂದ ಯಾರಿಗೆಲ್ಲ ಸಿಮ್‌ ಕಾರ್ಡ್‌ ವಿತರಣೆಯಾಗಿದೆಯೋ ಆ ಎಲ್ಲಾ ಗ್ರಾಹಕರು ಸಿಮ್‌ ಪಡೆಯಲು ನೀಡಿದ ದಾಖಲೆಗಳನ್ನು ಮರು ಪರಿಶೀಲಿಸಬೇಕಾಗುತ್ತದೆ.

ನವೆಂಬರ್ 30 ರೊಳಗೆ ನೋಂದಾಯಿಸದೇ ಉಳಿಯುವ ಸಿಮ್ ಕಾರ್ಡ್ ಮಾರಾಟಗಾರರು 10 ಲಕ್ಷ ರೂ.ವರೆಗೆ ದಂಡ ಪಾವತಿಸಬೇಕಾಗುತ್ತದೆ ಮತ್ತು ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಅಶ್ವಿನಿ ವೈಷ್ಣವ್‌ ಹೇಳಿದ್ದೇನು?
ಹಿಂದೆ ಜನರು ಮೊಬೈಲ್‌ ಸಿಮ್ ಕಾರ್ಡ್‌ಗಳನ್ನು ಬಲ್ಕ್‌ ರೀತಿ ಖರೀದಿಸುತ್ತಿದ್ದರು. ಸಿಮ್‌ ಕಾರ್ಡ್‌ ಬಲ್ಕ್‌ ಆಗಿ ಖರೀದಿಸಲು ಅವಕಾಶವಿತ್ತು. ಇನ್ನು ಮುಂದೆ ಇದನ್ನು ಕೊನೆಗೊಳಿಸಿ ಸರಿಯಾದ ವ್ಯಾಪಾರ ಸಂಪರ್ಕದ ನಿಬಂಧನೆಯನ್ನು ತರುತ್ತೇವೆ. ಇದರಿಂದಾಗಿ ಮೋಸದ ಕರೆಗಳನ್ನು ನಿಲ್ಲಿಸಲು ಸಹಾಯವಾಗಲಿದೆ. ದೇಶದಲ್ಲಿ 10 ಲಕ್ಷ ಸಿಮ್ ಡೀಲರ್‌ಗಳಿದ್ದು, ಅವರಿಗೆ ಪೊಲೀಸ್ ಪರಿಶೀಲನೆಗೆ ಸಾಕಷ್ಟು ಸಮಯ ನೀಡಲಾಗುವುದು ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್‌ ಆಗಸ್ಟ್‌ನಲ್ಲಿ ತಿಳಿಸಿದ್ದರು.

ಈ ವರ್ಷದ ಮೇ ತಿಂಗಳಲ್ಲಿ, ಪಂಜಾಬ್ ಪೊಲೀಸರು ನಕಲಿ ಗುರುತಿನ ಮೂಲಕ ಸಕ್ರಿಯಗೊಂಡ 1.8 ಲಕ್ಷ ಸಿಮ್ ಕಾರ್ಡ್‌ಗಳನ್ನು ನಿರ್ಬಂಧಿಸಿದ್ದರು. ಈ ಸಿಮ್ ಕಾರ್ಡ್‌ಗಳನ್ನು ನೀಡಿದ್ದಕ್ಕಾಗಿ 17 ಜನರನ್ನು ಬಂಧಿಸಿದ್ದರು.

Leave a Reply

error: Content is protected !!