ನೆಲ್ಯಾಡಿ ವಿಶ್ವವಿದ್ಯಾನಿಲಯ ಘಟಕ ಕಾಲೇಜು; ಕನ್ನಡ ವಿಭಾಗದ ವತಿಯಿಂದ ಕ್ಷೇತ್ರ ಕಾರ್ಯ. ವಿದ್ಯಾರ್ಥಿಗಳಿಂದ ಕಂಬಳ ಕ್ರೀಡೆಯ ಕ್ಷೇತ್ರ ಕಾರ್ಯ ಅಧ್ಯಯನ

ಶೇರ್ ಮಾಡಿ

ತುಳುನಾಡಿನ ಜನಪ್ರಿಯವಾದ ಜಾನಪದ ಕ್ರೀಡೆ ಕಂಬಳ. ಕಾಂತಾರ ಚಿತ್ರದಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಂಬಳ ಕ್ರೀಡೆಯ ಆಯೋಜನೆಯವರೆಗೂ ತುಳುನಾಡಿನ ಜಾನಪದ ಕ್ರೀಡೆಗಳ ಸಂಸ್ಕೃತಿಯ ವೈವಿಧ್ಯತೆಯು ಇಡೀ ಜಗತ್ತಿಗೆ ವಿಸ್ತರಿಸಿರುವುದು ಈ ಕ್ರೀಡೆಯ ಮಹತ್ವವನ್ನ ತಿಳಿಸಿಕೊಡುತ್ತದೆ. ಪ್ರಕೃತಿಯೊಂದಿಗೆನ ಅವಿನಾಭಾವ ಸಂಬಂಧಗಳನ್ನು ಇಟ್ಟುಕೊಂಡು ಬೆಳೆದು ಬಂದಿರುವ ತುಳುನಾಡಿನ ಸಂಸ್ಕೃತಿಯು ಪ್ರಸ್ತುತ ಬೇಸಾಯ ಮಾಡುವ ಗದ್ದೆಗಳೇ ವಿರಳವಾಗಿರುವ ಈ ಸಂದರ್ಭದಲ್ಲಿ ಪಾರಂಪರಿಕ ಸಂಸ್ಕೃತಿಗಳ ಅರಿವಿನ ಹಿನ್ನೆಲೆಯಲ್ಲಿ ಬಹುತೇಕ ವಿಸ್ಮೃತಿಗೆ ಒಳಗಾಗಿದ್ದು, ಅನೇಕ ಪಾರಂಪರಿಕ ಕ್ರೀಡೆಗಳು ಕೃಷಿ ಆಚರಣೆಗಳ ಮೂಲ ಬೇರುಗಳನ್ನು ಕಳಚಿಕೊಂಡು ಕೇವಲ ಮನರಂಜನಾತ್ಮಕ ಸ್ಪರ್ಧೆಗಳ ಸ್ವರೂಪದಲ್ಲಿ ನೆಲೆ ನಿಂತರೂ ಕೂಡ ಪಾರಂಪರಿಕ ಬೇರುಗಳನ್ನು ಈ ಕಂಬಳ ಕ್ರೀಡೆಯ ಸಮಗ್ರ ಅಧ್ಯಯನದ ಮೂಲಕ ಕಂಡುಕೊಳ್ಳಲು ಸಾಧ್ಯವಿದೆ ಎಂಬುದನ್ನು ಕಂಬಳ ಕ್ರೀಡೆಯ ಕುರಿತು ಕ್ಷೇತ್ರ ಕಾರ್ಯ ಮಾಡಿದ ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮತ್ತು ಮಾರ್ಗದರ್ಶಕರಾದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ನೂರಂದಪ್ಪ ಮತ್ತು ಶ್ರೀಮತಿ ಹೇಮಾವತಿ ಅವರ ಅಭಿಪ್ರಾಯವಾಗಿದೆ.

ಬಿ.ಎ ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ಒಟ್ಟು ಏಳು ತಂಡಗಳನ್ನಾಗಿ ಮಾಡಿ ಕಂಬಳ ಕ್ರೀಡೆಯ ಕ್ಷೇತ್ರ ಅಧ್ಯಯನ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಅಧ್ಯಯನದಲ್ಲಿ ಕಂಬಳ ಕ್ರೀಡೆಯ ಚಾರಿತ್ರಿಕ ಅವಲೋಕನವನ್ನು ವಿವಿಧ ಕೃತಿಗಳ ಮೂಲಕ ಮಾಡಿಕೊಂಡು, ನಂತರದಲ್ಲಿ ಕಂಬಳದ ಕೋಣಗಳ ಯಜಮಾನರ ಸಂದರ್ಶನ, ಕೋಣಗಳ ದಿನಚರಿ ಮತ್ತು ಕಂಬಳಗಳಲ್ಲಿ ಕೋಣಗಳು ಸ್ಪರ್ಧಿಸಿದ ವಿವರ ಮತ್ತು ಕಂಬಳದ ಓಟಗಾರರ ಸಂದರ್ಶನ ಈ ನಾಲ್ಕು ಹಂತಗಳಲ್ಲಿ ಕ್ಷೇತ್ರ ಅಧ್ಯಯನವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ.

ವಿದ್ಯಾರ್ಥಿನಿಯರಾದ ಕಾವ್ಯ, ಚೈತನ್ಯ, ಪುಷ್ಪಲತಾ ಇವರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೆರ್ಗಾಲು ಗ್ರಾಮದ ನಾಯಕನ ಕಟ್ಟೆಯ ರಾಜ ಮತ್ತು ಪಾಂಡು ಎಂಬ ಕೋಣಗಳ ದಿನಚರಿ ಹಾಗೂ ಯಜಮಾನರು ಹಾಗೂ ಓಟಗಾರರಾದ ವಿಶ್ವನಾಥ ದೇವಾಡಿಗರ ಸಂದರ್ಶನವನ್ನು ಮಾಡಿರುತ್ತಾರೆ.

ವಿದ್ಯಾರ್ಥಿಗಳಾದ ಲೀಲೆಶ್ ಮತ್ತು ದೀಪಕ್ ಇವರು ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ಮೂಡೆ ಮತ್ತು ಪಾಂಡು ಕೋಣಗಳ ದಿನಚರಿ ಹಾಗೂ ಅವು ಸ್ಪರ್ಧಿಸಿದ ಕಂಬಳಗಳ ಸಾಧನೆ, ಓಟಗಾರರಾದ ರವಿಕುಮಾರ್ ಅಳದಂಗಡಿ ಇವರ ಸಂದರ್ಶನವನ್ನು ಮಾಡಿರುತ್ತಾರೆ.

ವಿದ್ಯಾರ್ಥಿಗಳಾದ ಚೇತನ್, ಗಿರೀಶ್ ಮತ್ತು ಯತಿನ್ ಇವರು ಬಂಟ್ವಾಳ ತಾಲೂಕಿನ ಕುಂಟಾಲಪಲ್ಕೆಯ ಕಕ್ಕೆಪದವು ಗ್ರಾಮದ ಬೋಲ್ಲ ಮತ್ತು ಜಯ ಎಂಬ ಕೋಣಗಳ, ಹಾಗೂ ಓಟಗಾರರಾದ ದಿನೇಶ್ ಅವರ ಸಂದರ್ಶನ ಮಾಡಿರುತ್ತಾರೆ.

ವಿದ್ಯಾರ್ಥಿನಿಯರಾದ ಮೆರ್ಲಿನ್, ಮಂಜರಿ, ಅಫ್ರಿನಾ ಹಾಗೂ ಮುಶ್ರಿಫಾ ಇವರು ಮಾಣಿ ಸಾಹು ಹೊಸ ಮನೆಯ ಉಮೇಶ್ ಮಹಾಬಲ ಶೆಟ್ಟಿ ಇವರ ಸಂದರ್ಶನ ಮತ್ತು ಕೋಣಗಳ ಜನಚರಿಯನ್ನು ಕುರಿತು ಕ್ಷೇತ್ರ ಅಧ್ಯಯನವನ್ನು ಕೈಗೊಂಡಿರುತ್ತಾರೆ.

ವಿದ್ಯಾರ್ಥಿಗಳಾದ ರಿತೇಶ್ ಮತ್ತು ಹರೀಶ್ ಇವರು ಪುತ್ತೂರು ತಾಲೂಕಿನ ಕೈಪ ಗ್ರಾಮದವರಾದ ಯಜಮಾನ ಕೇಶವ ಭಂಡಾರಿ ಹಾಗೂ ಕಂಬಳ ಕ್ರೀಡೆಯ ಉಸೇನ್ ಬೋಲ್ಟ್ ಎಂದೇ ಪ್ರಖ್ಯಾತರಾದ ಓಟಗಾರರಾದ ಶ್ರೀನಿವಾಸಗೌಡ ಅವರ ಸಂದರ್ಶನವನ್ನು ಮಾಡಿರುತ್ತಾರೆ.

ಈ ಕ್ಷೇತ್ರ ಅಧ್ಯಯನಗಳ ಮೂಲಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಂಬಳದ ಕ್ರೀಡೆಯ ಮಹತ್ವ, ಐತಿಹಾಸಿಕ ಹಿನ್ನಲೆ, ಕೃಷಿ ಚಟುವಟಿಕೆಗಳಿಗೂ ಕ್ರೀಡೆಗಳಿಗೂ ಇರುವ ಸಂಬಂಧಗಳನ್ನು ಪ್ರಾಯೋಗಿಕವಾಗಿ ತಿಳಿದುಕೊಂಡರು.

ಕಂಬಳದ ಕೋಣಗಳನ್ನು ಸಾಕುವ ಯಜಮಾನರ ಸಂದರ್ಶನದ ಮೂಲಕ ಕಂಬಳದ ಕೋಣಗಳನ್ನು ಸಾಕುವ ರೀತಿ ಅವುಗಳ ದಿನಚರಿ ಅವುಗಳ ಆಹಾರ ಕ್ರಮ, ವಾರ್ಷಿಕ ಖರ್ಚುವೆಚ್ಚಗಳ ಮಾಹಿತಿ, ಅವುಗಳನ್ನು ಕಂಬಳಕ್ಕೆ ಸಿದ್ಧಪಡಿಸುವ ಕ್ರಮಗಳ ಜೊತೆಗೆ ಪಾರಂಪರಿಕವಾಗಿ ಬೆಳೆದು ಸಂಪ್ರದಾಯವನ್ನು ಉಳಿಸಿಕೊಂಡು ಬಂದಿರುವ ಸಂತೃಪ್ತ ಭಾವವನ್ನು ಕಂಡುಕೊಳ್ಳಲಾಗಿದೆ.

ಓಟಗಾರರ ಸಂದರ್ಶನದ ಮೂಲಕ ಓಟಗಾರರು ಕಂಬಳ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಪಡೆದುಕೊಂಡದ್ದು ಮತ್ತು ಅವರು ಯಾವ ಯಾವ ಕಂಬಳಗಳಲ್ಲಿ ಸ್ಪರ್ಧಿಸಿ ಪದಕಗಳನ್ನ ಗೆದ್ದಿರುವುದರ ಬಗ್ಗೆ ಮಾಹಿತಿಯನ್ನು ಕಲೆ ಹಾಕಿರುತ್ತಾರೆ. ಅನೇಕ ಕಂಬಳದ ಕೋಣಗಳ ಯಜಮಾನರು ಹೇಳುವ ಹಾಗೆ ಪ್ರಸ್ತುತ ಸಂದರ್ಭದಲ್ಲಿ ಯಾವುದೇ ಆರಾಧನೆ ಆಚರಣೆಗಳಿಲ್ಲದ ಕೇವಲ ಮನೋರಂಜನೆಯೇ ಮುಖ್ಯ ಉದ್ದೇಶವಾಗಿ ಇಟ್ಟುಕೊಂಡಿರುವ ಆಧುನಿಕ ಕಂಬಳವು ಕೇವಲ ಸ್ಪರ್ಧೆಗೆ ಮಾತ್ರ ಸೀಮಿತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ ಆದರೆ ಇಷ್ಟೆಲ್ಲ ಕಂಬಳದ ಮಹತ್ವವು ಉಳಿಯಬೇಕಾದರೆ ಈ ಕಂಬಳಗಳು ಈ ನಿಟ್ಟಿನಲ್ಲಾದರೂ ನಡೆಯಬೇಕೆಂಬ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಾರೆ.

ಆರಂಭದ ಮೂರು ವರ್ಷದ ಕೋಣಗಳ ಖರೀದಿಯಿಂದ ಹಿಡಿದು ಅದಕ್ಕೆ ತರಬೇತಿ ಕೊಡುವ ಕುದಿ ಕಂಬಳ ಎಂಬ ತರಬೇತಿಯಿಂದ ಹಿಡಿದು ಓಟಗಾರರ ಬಾಷೆಗೆ ತಕ್ಕಂತೆ ಅವುಗಳನ್ನು ಪಳಗಿಸುವ ಮೂಲಕ ಕಂಬಳ ಸ್ಪರ್ಧೆಗೆ ಸಿದ್ಧಪಡಿಸುವುದೇ ಒಂದು ಸಾಹಸದ ಪ್ರಕ್ರಿಯೆಯಾಗಿ ಕಂಡು ಬರುತ್ತದೆ. ಕಂಬಳದ ಓಟ ಪ್ರಕಾರಗಳಾದ ನೇಗಿಲ ಓಟ, ಹಗ್ಗದ ಓಟ, ಅಡ್ಡ ಹಲಗೆ ಓಟ, ಕೆನೆ ಹಲಗೆ ಓಟ ಈ ರೀತಿಯ ಅನೇಕ ಓಟಗಳ ಜೊತೆಗೆ ಕಂಬಳದ ಮುಖ್ಯ ಪ್ರಕಾರಗಳಾದ ಭಾರಿ ಕಂಬಳ, ಅರಸು ಅಥವಾ ದೇವರ ಕಂಬಳ, ಪೂಕರೆ ಕಂಬಳ ಈ ರೀತಿಯ ಅನೇಕ ಕಂಬಳಗಳ ಸಾಂಪ್ರದಾಯಿಕ ಮತ್ತು ಚಾರಿತ್ರಿಕ ಮಹತ್ವವನ್ನ ಈ ಅಧ್ಯಯನದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಲೆ ಹಾಕಿದ್ದಾರೆ.

ಪ್ರಖ್ಯಾತ ಓಟಗಾರರಾದ ಶ್ರೀನಿವಾಸಗೌಡ ಅವರು ಆರಂಭದಲ್ಲಿ ಅವರು ಕಟ್ಟಡದ ಕಾರ್ಮಿಕರಾಗಿಯೂ, ಅಡಿಕೆ ಮರಕ್ಕೆ ಹತ್ತಿ ಮದ್ದು ಬಿಡುವ ಕೆಲಸ ಮಾಡಿಕೊಂಡು ಕಂಬಳದ ಓಟಗಾರರಾಗಿ ಬೆಳೆದುಕೊಂಡ ಬಂದ ಸಂದರ್ಭವನ್ನು ವಿವರಿಸುತ್ತಾ ಪ್ರಸ್ತುತ ಸ್ವತಃ ಕೃಷಿಯಲ್ಲಿ ನಿರತರಾಗಿದ್ದಲ್ಲದೆ ಕಂಬಳದ ಓಟಗಾರರಾಗಿದ್ದಕ್ಕೆ ಕಂಬಳ ಪ್ರೀಯರೆಲ್ಲರೂ ಹೆಮ್ಮೆಪಡುತ್ತಾರೆ.

ದಿನೇಶ್ ಅವರು ಕೂಡ 1994 ರಿಂದ ಕಂಬಳ ಓಟ ಆರಂಭ ಮಾಡಿ ಇಲ್ಲಿಯವರೆಗೂ ಕೂಡ ನಿಲ್ಲಿಸದೆ ಮುಂದುವರಿಸಿರುವುದನ್ನು ಪ್ರಸ್ತಾಪಿಸುತ್ತಾರೆ.

ಕಂಬಳದ ಪ್ರಖ್ಯಾತ ಹಿರಿಯ ಓಟಗಾರ ಅಂದರೆ ರವಿಕುಮಾರ್ ಅಳದಂಗಡಿ. ಈಗ ಇವರಿಗೆ 57 ವಯಸ್ಸು. ಆದರೂ ಅವರು ಚಿರಯುವಕನಂತೆ ಕಂಬಳಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಾರೆ. 1991ರಲ್ಲಿ ಆರಂಭ ಮಾಡಿದ ಇವರ ಓಟ ಇನ್ನೂ ಕೂಡ ಮುಂದುವರೆದಿದೆ. ಇವರ ಮಗ ಗಿರೀಶ್ ಅಳದಂಗಡಿ ಅವರು ಕೂಡ ಓಟಗಾರರಾಗಿ ಹೆಸರುವಾಸಿಯಾಗಿದ್ದಾರೆ. ಹಾಗಾಗಿ ಕಂಬಳ ಕ್ರೀಡೆಯಲ್ಲಿ ತಂದೆ ಮತ್ತು ಮಗ ಓಟಗಾರರ ಜೋಡಿ ಎಂದೇ ಪ್ರಸಿದ್ಧವಾಗಿದೆ. ಕಂಬಳದ ಹಿರಿಯ ಓಟಗಾರರಾದ ಸದಾನಂದ ದೇವಾಡಿಗರೇ ರವಿಕುಮಾರ್ ಅಳದಂಗಡಿ ಅವರಿಗೆ ಸ್ಪೂರ್ತಿ ಎಂದು ಅವರು ಪ್ರಸ್ತಾಪ ಮಾಡುತ್ತಾರೆ. ಈವರೆಗೆ ಅವರು 319 ಪದಕಗಳನ್ನು ಗೆದ್ದಿರುವುದು ಅವರ ಸಾಧನೆಗೆ ಹಿಡಿದ ಕನ್ನಡಿ.

ಬೈಂದೂರು ತಾಲೂಕಿನ ಕೆರ್ಗಾಲು ಗ್ರಾಮದ ಕಂಬಳ ಓಟಗಾರರಾದ ವಿಶ್ವನಾಥ ದೇವಾಡಿಗ. ಇವರು 1997ರಲ್ಲಿ ಓಟವನ್ನು ಆರಂಭಿಸಿದ್ದು ಇಲ್ಲಿವರೆಗೂ ಒಟ್ಟು ಅನೇಕ ಪದಕಗಳನ್ನು ಗೆದ್ದಿರುತ್ತಾರೆ.

ಓಟಗಾರ ಸುಧೀರ್ ಅವರು ಕಾರ್ಕಳದವರು. 25 ಕ್ಕಿಂತ ಹೆಚ್ಚು ಪದಕಗಳನ್ನು ಪಡೆದುಕೊಂಡಿದ್ದು ಇವರು ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದು ಕಂಬಳ ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಹೀಗೆ ವೃತ್ತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಂಡು, ಕಂಬಳದ ಓಟಗಾರರಾಗಿ ಕರಾವಳಿಯ ಮನೆಮಾತಾಗಿರುವ ಈ ಎಲ್ಲಾ ಓಟಗಾರರ ಅಭಿಪ್ರಾಯಗಳು ಕಂಬಳ ಕ್ರೀಡೆಯ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡಿದವು. ಎಂಬುದು ಸಂದರ್ಶಕರಾದ ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.

ಬೇಸಾಯ ಮಾಡುವ ಗದ್ದೆಗಳು ನಾಶವಾಗಿರುವ ಸಂದರ್ಭದಲ್ಲಿ ರೈತರ ಜೀವನದ ಅವಿಭಾಜ್ಯ ಅಂಗವಾಗಿದ್ದ ಈ ಕಂಬಳ ಕ್ರೀಡೆಯು ಈಗ ಮನೋರಂಜನೆಯ ಅವಿಭಾಜ್ಯ ಅಂಗವಾಗಿದೆ ಎನ್ನುವ ಕೋಣಗಳ ಯಜಮಾನರು ಸರಕಾರದಿಂದ ಈ ಕಂಬಳದ ಕೋಣಗಳ ಸಾಕಾಣಿಕೆಗೆ ಯಾವುದೇ ಸೌಲಭ್ಯಗಳು ಕೂಡ ಇರುವುದಿಲ್ಲ, ಹಾಗಾಗಿ ಕಂಬಳದ ಕೋಣಗಳನ್ನು ಸಾಕುವುದಕ್ಕೆ ಸರಕಾರದಿಂದ ಸಹಾಯಧನದಂತಹ ಬೇರೆ ಬೇರೆ ರೀತಿಯ ಯೋಜನೆಗಳನ್ನು ಮಾಡಿದರೆ ತುಂಬಾ ಉತ್ತಮ ಆಗುತ್ತದೆ ಎಂದು ರವಿಕುಮಾರ್ ಅಳದಂಗಡಿ ಅವರು ಅಭಿಪ್ರಾಯ ಪಡುತ್ತಾರೆ. ಮುಂದಿನ ದಿನಗಳಲ್ಲಿ ಸರಕಾರವೇ ಕಂಬಳ ಕ್ರೀಡೆಗಳನ್ನು ನಡೆಸಿದರೂ ಅಚ್ಚರಿಯಿಲ್ಲ ಎಂಬ ಮಾತೂ ಕೂಡ ಕಂಬಳಪ್ರಿಯರಲ್ಲಿ ಮೊಳಕೆಯೊಡೆದಿದರಬಹುದು ಅನಿಸುತ್ತದೆ.

ಈ ಕಂಬಳ ಕ್ರೀಡೆಯ ಸಮಗ್ರ ಅವಲೋಕನವನ್ನು ಕ್ಷೇತ್ರ ಅಧ್ಯಯನದ ಮೂಲಕ ಸಂಶೋಧನಾ ವೈಧಾನಿಕತೆಗಳೊಂದಿಗೆ ಸಿದ್ಧಪಡಿಸಿದ ವಿದ್ಯಾರ್ಥಿಗಳು ಅಭಿನಂದನಾರ್ಹರು. ಬೆಂಗಳೂರಿನ ಕಂಬಳಕ್ಕೆ ಸಿದ್ದತೆ ಮಾಡಿಕೊಳ್ಳುವ ಸಂದರ್ಭದ ನಡುವೆಯೇ ವಿದ್ಯಾರ್ಥಿಗಳಿಗೆ ಸಮಯ ನೀಡಿ ಮಾಹಿತಿಯೊಂದಿಗೆ ಸಂದರ್ಶನಕೆ ಅವಕಾಶ ಮಾಡಿಕೊಟ್ಟ ಕೋಣಗಳ ಯಜಮಾನರಿಗೂ, ಕಂಬಳದ ಓಟಗಾರರಿಗೂ ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಪ್ರೀತಿಯ ಕೃತಜ್ಞತೆಗಳು.

Leave a Reply

error: Content is protected !!