ಗೋಗಟೆ ಕುಲ ಮಂಡಲ ಮಹಾರಾಷ್ಟ್ರ ಆಶ್ರಯ ದಲ್ಲಿ ಗೋಗಟೆ ಕುಲ ಸಮ್ಮೇಳನವನ್ನು ಡಿ.1 ರಿಂದ ಡಿ.3 ರವರೆಗೆ ದರ್ಭೆತಡ್ಕ ಶ್ರೀ ಕಾಲಕಾಮ ಪರಶುರಾಮ ವಠಾರದ ಕೃಷ್ಣಾನಂದ ವಿಷ್ಣು ಗೋಗಟೆ ವೇದಿಕೆಯಲ್ಲಿ ನಡೆಸಲಾಗುವುದು.
ಈ ಸಂದರ್ಭದಲ್ಲಿ ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸ್ಥಳೀಯ ಗೋಗಟೆ ಕುಟುಂಬದ ಬಂಧುಗಲ್ಲದೆ ಮಹಾರಾಷ್ಟ್ರದಿಂದ ಸುಮಾರು 150 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಡಿ.1ರಂದು ಬೆಳಗ್ಗೆ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಅಪರಾಹ್ನ ಮೆಡಿಟೇಶನ್ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳಿದ್ದು ಬಳಿಕ ಚಿತ್ಪಾವನಿ ಭಾಷೆಯಲ್ಲಿ ಭಾರ್ಗವ ವಿಜಯ ಎಂಬ ಯಕ್ಷಗಾನ ನಡೆಯಲಿದೆ.
ಡಿ.2 ರಂದು ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮವಿದ್ದು ಗೋಗಟೆ ಕುಲಮಂಡಲದ ಅಧ್ಯಕ್ಷರಾದ ಕಿಶೋರ್ ಗೋಗಟೆ ಪೂನಾ, ಸಮ್ಮೇಳನದ ಸಂಯೋಜಕರಾದ ನಾರಾಯಣ ಶಂಕರ್ ಗೋಗಟೆ ಮತ್ತು ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಚಿ.ಬ್ರಾ.ಸಂಘದ ಅಧ್ಯಕ್ಷರಾದ ತ್ರಿವಿಕ್ರಮ ಹೆಬ್ಬಾರ್ ಕೇಳ್ಕರ್ ಮತ್ತು ಶಿಶಿಲ ಸೀಮಾ ಚಿ.ಸಂಘದ ಅಧ್ಯಕ್ಷರಾದ ವರದ ಶಂಕರ ದಾಮಲೆ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಗೋವಿಂದ ದಾಮಲೆಯವರು ಸಂಪಾದಿಸಿದ “ಗೋಗಟೆ ಕುಲ ವೃತ್ತಾಂತ” ಪುಸ್ತಕದ ಬಿಡುಗಡೆ ನಡೆಯಲಿದೆ. ಬಳಿಕ ಗೋಗಟೆ ಕುಲದ ಸಾಧಕರಿಗೆ ಸನ್ಮಾನ, ಹಿರಿಯರಿಗೆ ಸನ್ಮಾನ, ಕುಟುಂಬದ ಹೆಣ್ಣುಮಕ್ಕಳಿಗೆ ಗೌರವ ಅರ್ಪಣೆ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಎನ್.ಕರುಣಾಕರ ಗೋಗಟೆ ವಹಿಸಲಿರುವರು. ಅಪರಾಹ್ನ ಡಾ.ಗೋಪಾಲ್ ಮರಾಠೆ, ಮೈಸೂರು ಇವರು “ಕರ್ನಾಟಕದಲ್ಲಿ ಚಿತ್ ಪಾವನರು” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ, ಮುಂದೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ವಿದುಷಿ ಸಂಜನಾ ಗೋಗಟೆ ಯವರ ಭರತನಾಟ್ಯ ಪ್ರದರ್ಶನವಿದೆ.
ಸಮ್ಮೇಳನದ ಕಾರ್ಯದರ್ಶಿ ಹೃಷಿಕೇಶ ಹೆಬ್ಬಾರ್ ಗೋಗಟೆ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.