ರೆಸ್ಟೋರೆಂಟ್‌ನಲ್ಲಿ ಕೈ ತೊಳೆದು ಬರುವಷ್ಟರಲ್ಲಿ ಪಿಎಸ್‌ಐ ಪಿಸ್ತೂಲ್ ಮಂಗಮಾಯ!

ಶೇರ್ ಮಾಡಿ

ಊಟ ಮುಗಿಸಿ ಕೈ ತೊಳೆದು ಬರುವಷ್ಟರಲ್ಲಿ ಪಿಎಸ್‌ಐ ಒಬ್ಬರ ಪಿಸ್ತೂಲ್ ನಾಪತ್ತೆಯಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ನಾಪತ್ತೆ ಪ್ರಕರಣವೊಂದರ ತನಿಖೆಗಾಗಿ ಗುರುವಾರ ಕರ್ತವ್ಯದ ಮೇಲೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳಿದ್ದ ಕೆ ಆರ್ ಪುರಂ ಠಾಣೆ ಪಿಎಸ್‌ಐ ಕಲ್ಲಪ್ಪ ಅವರು ಚನ್ನಗಿರಿ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಚಿತ್ರದುರ್ಗ ತಾಲೂಕಿನ ಜಾನಕೊಂಡ ಗ್ರಾಮದ ಬಳಿಯ ರೆಸ್ಟೋರೆಂಟ್‌ಗೆ ಊಟಕ್ಕೆಂದು ತೆರಳಿದ್ದರು.

ಕಲ್ಲಪ್ಪ ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿ, ಕೈ ತೊಳೆದು ಬರುವಷ್ಟರಲ್ಲಿ ಟೇಬಲ್ ಮೇಲಿಟ್ಟಿದ್ದ ಪಿಸ್ತೂಲ್ ಹಾಗೂ ಬ್ಯಾಗ್ ಒಂದು ನಾಪತ್ತೆಯಾಗಿದೆ. ಆ ಬ್ಯಾಗ್ ನಲ್ಲಿ ರಿವಾಲ್ವರ್‌ಗೆ ಬಳಸುವ 10 ಜೀವಂತ ಗುಂಡುಗಳು ಸೇರಿದಂತೆ ಪ್ರಮುಖ ವಸ್ತುಗಳು ಸಹ ಇದ್ದವು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಬಳಿಕ ಪಿಎಸ್‌ಐ ಕಲ್ಲಪ್ಪ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಳಿಕ ಚಿತ್ರದುರ್ಗ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿದ್ದ ಸಿಸಿಟಿವಿ ಪರಿಶೀಲಿಸಿ, ರಿವಾಲ್ವರ್ ಕದ್ದ ಕಳ್ಳರಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

Leave a Reply

error: Content is protected !!