ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಗೆ ಕ್ಯಾಪ್ಟನ್ ಅರ್ಜುನ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಯಸಳೂರು ಬಳಿ ನಡೆದಿದೆ.
ನಾಲ್ಕು ಸಾಕಾನೆಗಳೊಂದಿಗೆ ಸೋಮವಾರ ಬೆಳಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ದಾಳಿ ಮಾಡಿದೆ. ಒಂಟಿಸಲಗ ದಾಳಿ ಮಾಡುತ್ತಿದ್ದಂತೆಯೇ ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಆದರೆ, ಅರ್ಜುನ ಮಾತ್ರ ಒಂಟಿಸಲಗದ ಜೊತೆ ಕಾಳಗಕ್ಕಿಳಿದಿದೆ.
ಇಳಿದು ಓಡಿದ ಮಾವುತರು!
ಎರಡು ಆನೆಗಳು ಕಾದಾಟ ಆರಂಭಿಸುತ್ತಿದ್ದಂತೆಯೇ ಅರ್ಜುನನ ಮಾವುತರು ಮೇಲಿನಿಂದ ಇಳಿದು ಓಡಿದ್ದಾರೆ. ಇದಾದ ಬಳಿಕ ನಡೆದ ಭೀಕರ ಕಾಳಗದಲ್ಲಿ ಅರ್ಜುನ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಹಾಸನ ಜಿಲ್ಲೆಯ ಮಲೆನಾಡು ಭಾಗದ ಜನರ ನಿದ್ದಗೆಡಿಸಿರುವ ಕಾಡಾನೆ ಹಾವಳಿ ತಡೆಗೆ ಅರಣ್ಯ ಇಲಾಖೆ ಇತ್ತೀಚೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅವುಗಳ ಚಲನ ವಲನಗಳ ಮೇಲೆ ಗಮನ ಇಡುವ ಕೆಲಸವನ್ನೂ ಮಾಡುತ್ತಿದೆ.
ಹಾಸನದ ಬೇಲೂರು ತಾಲ್ಲೂಕಿನ ಅರೇಹಳ್ಳಿ ಬಳಿಯ ಅಣ್ಣಾಮಲೈ ಎಸ್ಟೇಟ್‌ನಲ್ಲಿ ಕಳೆದ ಗುರುವಾರವಷ್ಟೇ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಕೆಲವು ದಿನಗಳ ಹಿಂದಷ್ಟೇ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ವಳಲು ಗ್ರಾಮದಲ್ಲಿ ಕಾಡಾನೆಯೊಂದನ್ನು ಸೆರೆಹಿಡಿಯಲಾಗಿತ್ತು.