ಮನೆಯವರ ವಿರೋಧದ ನಡುವೆಯೂ ಮುಸ್ಲಿಂ ಹುಡುಗಿ ಹಿಂದೂ ಹುಡಗನ ಕೈ ಹಿಡಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಮಂಜುನಾಥ್ ಹಾಗೂ ಉಮೇದ್ ಕಳೆದ ಆರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಅವರ ಪ್ರೀತಿಗೆ (Love) ಯುವತಿಯ ಮನೆಯವರ ತೀವ್ರ ವಿರೋಧವಿತ್ತು. ಅದಕ್ಕೆ ಕಾರಣ ಅವರಿಬ್ಬರ ಧರ್ಮ. ಆದರೆ ಈ ಪ್ರೇಮಿಗಳು ಧರ್ಮವನ್ನೂ ಮೀರಿ ಪ್ರೀತಿಸಿದ್ದು, ಕೊನೆಗೆ ಪೊಲೀಸ್ ಠಾಣೆಯಲ್ಲಿ ಮದುವೆಯಾಗುವ (Marriage) ಮೂಲಕ ಒಂದಾಗಿದ್ದಾರೆ.
ಧಾರವಾಡ ತಾಲೂಕಿನ ಬಾಡ ಗ್ರಾಮದವರಾದ ಇವರಿಬ್ಬರು ಅನ್ಯ ಧರ್ಮಕ್ಕೆ ಸೇರಿದವರಾಗಿದ್ದರು. ಯುವಕ ಮಂಜುನಾಥ್ ಹಿಂದೂ ಧರ್ಮಕ್ಕೆ ಸೇರಿದರೆ, ಯುವತಿ ಉಮೇದ್ ಮುಸ್ಲಿಂ ಧರ್ಮದವಳು. ಇವರ ಪ್ರೇಮಕ್ಕೆ ಯುವಕನ ಮನೆಯವರ ವಿರೋಧವೇನೂ ಇರಲಿಲ್ಲ. ಆದರೆ ಯುವತಿಯ ಮನೆಯವರು ಇವರಿಬ್ಬರ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ವಿರೋಧದ ಮಧ್ಯೆಯೂ ಪ್ರೇಮಿಗಳು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತಮ್ಮ ವಿವಾಹ ನೋಂದಣಿ ಸಹ ಮಾಡಿಕೊಂಡು ಊರು ಬಿಟ್ಟು ಹೋಗಿದ್ದರು. ಈ ಸಂಬಂಧ ಧಾರವಾಡದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುವತಿ ನಾಪತ್ತೆ ಕೇಸ್ ಕೂಡ ದಾಖಲಾಗಿತ್ತು.
ಇಂದು ಇಬ್ಬರೂ ಪ್ರೇಮಿಗಳು ತಮ್ಮನ್ನು ಒಂದು ಮಾಡುವಂತೆ ಪೊಲೀಸರ ಮೊರೆ ಹೋಗಿದ್ದರು. ಸ್ವತಃ ತಾವೇ ಠಾಣೆಗೆ ಬಂದು ಹಾಜರಾಗಿದ್ದರು. ಆದರೆ ಪೊಲೀಸರು ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸುವ ಮೂಲಕ ಇಬ್ಬರನ್ನೂ ಬೇರೆ ಬೇರೆ ಮಾಡುವ ಕೆಲಸ ಮಾಡಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಬಜರಂಗದಳ ಕಾರ್ಯಕರ್ತರು ಇಬ್ಬರೂ ಪ್ರೇಮಿಗಳನ್ನು ಒಂದು ಮಾಡಬೇಕು. ಯುವಕನ ಜೊತೆ ಹೋಗಲು ಯುವತಿಯ ಮನಸ್ಸಿದ್ದರೂ ಆಕೆಯನ್ನು ಒತ್ತಾಯದಿಂದ ಸಾಂತ್ವನ ಕೇಂದ್ರಕ್ಕೆ ಕಳುಹಿಸಿರುವುದು ಏಕೆ ಎಂದು ಪ್ರಶ್ನೆ ಮಾಡಿದ್ದರು. ಸದ್ಯ ಬಜರಂಗದಳದ ಕಾರ್ಯಕರ್ತರು ಇಬ್ಬರೂ ಪ್ರೇಮಿಗಳಿಗೆ ಠಾಣೆಯಲ್ಲೇ ಮದುವೆ ಸಹ ಮಾಡಿಸಿ ಈ ವಿವಾದಕ್ಕೆ ಅಂತ್ಯ ಹಾಡಿದ್ದಾರೆ.