ಅಕ್ರಮ ಡಾಮರು ದಂಧೆ ಭೇದಿಸಿದ ಪೊಲೀಸರು

ಶೇರ್ ಮಾಡಿ

ಕಡೇಶ್ವಾಲ್ಯ ಗ್ರಾಮದ ಅಮೈಯಲ್ಲಿ ನಡೆಯುತ್ತಿದ್ದ ಡಾಮರು ದಂಧೆಯನ್ನು ಭೇದಿಸುವಲ್ಲಿ ಸೆನ್‌ ಅಪರಾಧ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದು, 6 ಟ್ಯಾಂಕರ್‌ಗಳ ಸಹಿತ ಇತರ ಸೊತ್ತುಗಳನ್ನು ವಶಕ್ಕೆ ಪಡೆದು 10 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಡಿ.8ರಂದು ರಾತ್ರಿ ಆರೋಪಿಗಳು ಕಡೇಶ್ವಾಲ್ಯದ ಅಮೈಯಲ್ಲಿ ಡಾಮರನ್ನು ಟ್ಯಾಂಕರ್‌ಗಳಿಗೆ ವರ್ಗಾಯಿಸುತ್ತಿದ್ದ ಸಂದರ್ಭ ಸೆನ್‌ ಪೊಲೀಸ್‌ ಠಾಣೆಯ ಪಿಎಸ್‌ಐ ಮಂಜುನಾಥ್‌ ಟಿ. ಮತ್ತು ಸಿಬಂದಿ ದಾಳಿ ನಡೆಸಿ ಪ್ರಕರಣ ಭೇದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ವಿಜಯಕುಮಾರ್‌ ಶೆಟ್ಟಿ, ಸುಧಾಕರ ಶೆಟ್ಟಿ, ಮಹಮ್ಮದ್‌ ಇಮ್ರಾನ್‌, ಅಶ್ರಫ್‌ ಎಂ., ವಿರೇಂದ್ರ ಎಸ್‌.ಆರ್‌., ಮಾದಸ್ವಾಮಿ, ಪ್ರಭಾಕರನ್‌, ನವೀನ್‌ ಕುಮಾರ್‌ಎಂ.ಜಿ., ಮಹಮ್ಮದ್‌ ನಿಸಾರ್‌, ಮಹಮ್ಮದ್‌ ಸಿಹಾಬುದ್ದೀನ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳು ಎಂಆರ್‌ಪಿಎಲ್‌ ಸಂಸ್ಥೆಯಿಂದ ಡಾಮರು ಲೋಡ್‌ ಮಾಡಿಕೊಂಡು ಬಂದ ಟ್ಯಾಂಕರ್‌ಗಳಿಂದ ಅಕ್ರಮವಾಗಿ ಡಾಮರನ್ನು ಕಳ್ಳತನ ಮಾಡಿ ಬೇರೆ ಟ್ಯಾಂಕರ್‌ಗಳಿಗೆ ವರ್ಗಾಯಿಸುತ್ತಿದ್ದರು.

ಈ ವೇಳೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಉಡುಪಿಯ ವಿಜಯ ಕುಮಾರ್‌ ಶೆಟ್ಟಿ ಅವರ ಸೂಚನೆಯಂತೆ ಕಡೇಶ್ವಾಲ್ಯ ಗ್ರಾಮದ ಸುಧಾಕರ ಶೆಟ್ಟಿ ಯಾನೆ ಸುಧಾಕರ ಕೊಟ್ಟಾರಿ ಅವರೊಂದಿಗೆ ಸೇರಿ ಈ ಕೃತ್ಯ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಪ್ರಕರಣಕ್ಕೆ ಬಳಸಿದ್ದ 6 ಟ್ಯಾಂಕರ್‌ಗಳು, ತೂಕ ಮಾಪನ, ಡಾಮರು ಬಿಸಿ ಮಾಡುವ ಗ್ಯಾಸ್‌ ಸಿಲಿಂಡರ್‌, ಕಬ್ಬಿಣದ ಟ್ಯಾಂಕ್‌ ಹಾಗೂ 9 ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!