ಸಮುದ್ರಪಾಲಾದ ವಿದ್ಯಾರ್ಥಿಗಳ ಮೃತದೇಹ ಪತ್ತೆ

ಶೇರ್ ಮಾಡಿ

ಸೋಮೇಶ್ವರದ ಅಲಿಮಕಲ್ಲು ಬಳಿ ಸಮುದ್ರ ಪಾಲಾದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಅದೇ ಪ್ರದೇಶದಲ್ಲಿ ಪತ್ತೆಯಾಗಿದೆ.

ಕುಂಜತ್ತೂರು ಅಡ್ಕ ನಿವಾಸಿ ಶೇಖರ ಎಂಬವರ ಪುತ್ರ ಯಶ್ವಿತ್(18) ಮತ್ತು ಕುಂಜತ್ತೂರು ಮಜಲ್ ನಿವಾಸಿ ಜಯೇಂದ್ರ ಎಂಬವರ ಪುತ್ರ ಯುವರಾಜ್(18) ಸಮುದ್ರ ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು.

ಸೊಮೇಶ್ವರ ಪರಿಜ್ಞಾನ ಕಾಲೇಜಿನಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಯಶ್ವಿತ್, ಯುವರಾಜ ಸೇರಿದಂತೆ ಒಟ್ಟು ಆರು ಮಂದಿ ವಿದ್ಯಾರ್ಥಿಗಳು ಶನಿವಾರ ಮದ್ಯಾಹ್ನ 12.40ಕ್ಕೆ ಕಾಲೇಜು ಮುಗಿಸಿ ಸೋಮೇಶ್ವರ ಶ್ರೀ ಸೊಮನಾಥ ದೇವಸ್ಥಾನಕ್ಕೆ ತೆರಳಿದ್ದರು.

ಪೂಜೆಯ ಬಳಿಕ ದೇವಸ್ಥಾನದಲ್ಲಿ ಊಟ ಮುಗಿಸಿ ಅಲ್ಲೇ ಪಕ್ಕದ ಮರದಡಿಯಲ್ಲಿ ಕುಳಿತಿದ್ದರು. ಸುಮಾರು ಮೂರು ಗಂಟೆಯ ಬಳಿಕ ಸ್ಥಳೀಯ ಗೂಡಂಗಡಿಯಿಂದ ತಿಂಡಿ ತೆಗೆದುಕೊಂಡು ಸೋಮೇಶ್ವರ ದೇವಸ್ಥಾನದಿಂದ ಉಚ್ಚಿಲದ ಕಡೆಗೆ ಸುಮಾರು ಒಂದು ಕಿ. ಮೀ.ಸಮುದ್ರದ ಬದಿಯಲ್ಲೇ ನಡೆದುಕೊಂಡು ಹೋಗಿದ್ದು, ಸೋಮೇಶ್ವರ ಅಲಿಮಕಲ್ಲು ಬಳಿ ಸಮುದ್ರಕ್ಕೆ ಇಳಿದಿದ್ದರು.

ಈ ಸಂದರ್ಭ ನಾಲ್ವರು ಸಮುದ್ರ ಬದಿಯಲ್ಲಿ ಕುಳಿತಿದ್ದರೆ, ಯುವರಾಜ್ ಮತ್ತು ಯಶ್ವಿತ್ ಸಮುದ್ರದ ನೀರಿಗಿಳಿದು ಕಲ್ಲಿನ ಬಳಿ ತೆರಳಿದ್ದರು. ಈ ಸಂದರ್ಭದಲ್ಲಿ ಸಮುದ್ರದ ಅಲೆಯೊಂದಕ್ಕೆ ಯುವರಾಜ್ ಜಾರಿ ಬಿದ್ದು ಸಮುದ್ರ ಪಾಲಾದಾಗ ಯಶ್ವಿತ್ ಆತನನ್ನು ರಕ್ಷಿಸಲು ಹೋಗಿ ಸಮುದ್ರ ಪಾಲಾಗಿದ್ದರು.

ಮೃತದೇಹವನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ‌ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!