ಮಹಿಳಾ ಟೆಕ್ಕಿಯನ್ನು ಮದುವೆಯಾಗಲು ಲಿಂಗ ಬದಲಾಯಿಸಿಕೊಂಡಿದ್ದ ಮಾಜಿ ಸಹಪಾಠಿ, ಆಕೆ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
24 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ನಂದಿನಿ ಕೊಲೆಯಾದ ಯುವತಿ. ಆಕೆಯ ಹುಟ್ಟುಹಬ್ಬದ ಮುನ್ನಾದಿನ ಈ ಘಟನೆ ನಡೆದಿದೆ. ಚೆನ್ನೈನ ದಕ್ಷಿಣ ಉಪನಗರವಾದ ಕೆಲಂಬಾಕ್ಕಂ ಬಳಿಯ ತಲಂಬೂರ್‌ನಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ವೆಟ್ರಿಮಾರನ್ ಅಲಿಯಾಸ್ ಪಾಂಡಿ ಮಹೇಶ್ವರಿ (26)ಯಿಂದ ಈ ಹತ್ಯೆ ನಡೆದಿದೆ. ನಂದಿನಿಗೆ ಹುಟ್ಟುಹಬ್ಬದ ಸರ್ಪ್ರೈಸ್ ನೀಡುವ ನೆಪದಲ್ಲಿದಲ್ಲಿ ಆರೋಪಿಯಿಂದ ಹತ್ಯೆ ನಡೆದಿದೆ.
ಮಧುರೈ ಮೂಲದ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ನಂದಿನಿ ಚೆನ್ನೈನಲ್ಲಿ ಸಂಬಂಧಿಕರೊಂದಿಗೆ ನೆಲೆಸಿದ್ದಳು. ನಂದಿನಿ ಸಹಪಾಠಿಯಾಗಿದ್ದ ಪಾಂಡಿ ಮಹೇಶ್ವರಿ ಲಿಂಗ ಬದಲಾಯಿಸಿಕೊಂಡು ವೆಟ್ರಿಮಾರನ್ ಆಗಿದ್ದ. ಗೆಳತಿ ಮೇಲಿನ ಪ್ರೀತಿಯಿಂದ ಪಾಂಡಿ ಮಹೇಶ್ವರಿ ಲಿಂಗ ಬದಲಾಯಿಸಿಕೊಂಡಿದ್ದಳು. ನಂತರ ವೆಟ್ರಿಮಾರನ್ ಆಗಿ ಬದಲಾಗಿದ್ದ.
ಚೆನ್ನೈನಲ್ಲಿ ಸ್ನೇಹಿತರಾಗಿದ್ದ ಇವರು ಒಟ್ಟಿಗೆ ವಾಸಿಸುತ್ತಿದ್ದರು. ಯಾವುದೇ ಲೈಂಗಿಕ ದೌರ್ಜನ್ಯದ ಸುಳಿವು ಇನ್ನೂ ಕಂಡುಬಂದಿಲ್ಲ. ವೆಟ್ರಿಮಾರನ್ ಈ ಹಿಂದೆ ಹಿಂಸಾತ್ಮಕ ಪ್ರವೃತ್ತಿಯನ್ನು ಪ್ರದರ್ಶಿಸಿದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಾಂಬರಂ ಪೊಲೀಸ್ ಕಮಿಷನರ್ ಅಮಲ್ರಾಜ್ ತಿಳಿಸಿದ್ದಾರೆ.
ಇವರಿಬ್ಬರ ನಡುವಿನ ಸಂಬಂಧದಲ್ಲಿ ಕರಾಳ ತಿರುವು ಮೂಡಿರುವುದು ತನಿಖೆಯಿಂದ ತಿಳಿದುಬಂದಿದೆ. ಮಧುರೈನಲ್ಲಿ ಒಟ್ಟಿಗೆ ಓದಿದ ನಂದಿನಿ, ವೆಟ್ರಿಮಾರನ್ ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರವೂ ಸ್ನೇಹವನ್ನು ಮುಂದುವರೆಸಿದ್ದಳು. ಇವರಿಬ್ಬರೂ ತೊರೈಪಾಕ್ಕಂನಲ್ಲಿರುವ ಖಾಸಗಿ ಐಟಿ ಸಂಸ್ಥೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಂದಿನಿ ಬೇರೆಯವರ ಮೇಲೆ ಆಸಕ್ತಿ ಹೊಂದಿದ್ದಾಳೆ ಎಂಬ ಶಂಕೆ ವೆಟ್ರಿಮಾರನ್‌ನಲ್ಲಿ ಮೂಡಿತ್ತು. ಇದು ಭೀಕರ ಹತ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆ ಆರೋಪದಡಿ ವೆಟ್ರಿಮಾರನ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.