ನಾಳೆಯಿಂದ ಏನೇನು ಬದಲಾವಣೆ?

ಶೇರ್ ಮಾಡಿ

ಆಧಾರ್‌ ಕಾರ್ಡ್‌ ತಿದ್ದುಪಡಿಗೆ ಶುಲ್ಕ
ನಿಮ್ಮ ಆಧಾರ್‌ಕಾರ್ಡ್‌ನಲ್ಲಿ ಏನಾದರೂ ತಿದ್ದುಪಡಿ ತರಬೇಕೆಂದಿದ್ದರೆ, ಅದನ್ನು ಡಿ.31ರೊಳಗಾಗಿ ಮಾಡಿ ಮುಗಿಸಿ. ಜ.1ರ ಅನಂತರ ಯಾವುದೇ ಬದಲಾವಣೆ ಮಾಡಬೇಕೆಂದಿದ್ದರೂ ತಲಾ 50 ರೂ. ಶುಲ್ಕ ತೆರಬೇಕಾಗುತ್ತದೆ.

ಸಿಮ್‌ ಕಾರ್ಡ್‌ಗೆ ಕೆವೈಸಿ
ಜ.1ರಿಂದ ಎಲ್ಲ ಕೆವೈಸಿ(ನಿಮ್ಮ ಗ್ರಾಹಕರನ್ನು ಅರಿಯಿರಿ) ಸಂಬಂಧಿತ ಕೆಲಸಗಳು ಡಿಜಿಟಲ್‌ ಮೋಡ್‌ನ‌ಲ್ಲೇ ನಡೆಯಲಿದೆ. ಹೊಸ ಸಿಮ್‌ ಕಾರ್ಡ್‌ಗೆ ಅರ್ಜಿ ಹಾಕುವವರು ಕೂಡ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಕಾಗದದ ಅರ್ಜಿಯನ್ನು ಭರ್ತಿ ಮಾಡಬೇಕಾಗಿಲ್ಲ. ಎಲ್ಲ ಪ್ರಕ್ರಿಯೆಗಳೂ ಡಿಜಿಟಲ್‌ ರೂಪದಲ್ಲಿ ಇರಲಿವೆ.

ಬ್ಯಾಂಕ್‌ ಲಾಕರ್‌ ಒಪ್ಪಂದ
ನೀವು ಬ್ಯಾಂಕ್‌ನಲ್ಲಿ ಲಾಕರ್‌ ಹೊಂದಿದ್ದರೆ, ಡಿ.31ರೊಳಗಾಗಿ ಪರಿಷ್ಕೃತ ಒಪ್ಪಂದಕ್ಕೆ ಸಹಿ ಹಾಕಬೇಕು. ಯಾರು ರವಿವಾರದ ಒಳಗಾಗಿ ಅಗ್ರಿಮೆಂಟ್‌ಗೆ ಸಹಿ ಹಾಕುವುದಿಲ್ಲವೋ, ಅವರ ಲಾಕರ್‌ಗಳು ಸ್ತಂಭನಗೊಳ್ಳಲಿವೆ.

ನಕಲಿ ಸಿಮ್‌ಗಳಿಗೆ ಕಡಿವಾಣ
ಹೊಸ ಟೆಲಿಕಮ್ಯೂನಿಕೇಶನ್‌  ಮ ಸೂ ದೆಯು ಇತ್ತೀಚೆಗೆ ಸಂಪುಟದಲ್ಲಿ ಅಂಗೀಕಾರಗೊಂಡಿದೆ. ಅದರಂತೆ, ಇನ್ನು ಮುಂದೆ ನಕಲಿ ಸಿಮ್‌ ಕಾರ್ಡ್‌ ಗಳನ್ನು ಖರೀದಿಸಿದರೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ತಪ್ಪಿತಸ್ಥರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ವರೆಗೆ ದಂಡವನ್ನೂ ವಿಧಿಸಲಾಗುತ್ತದೆ.

ಬಯೋಮೆಟ್ರಿಕ್‌ ವಿವರ ಕಡ್ಡಾಯ
ಸಿಮ್‌ ಕಾರ್ಡ್‌ ಖರೀದಿಸುವ ಪ್ರತಿಯೊಬ್ಬ ಗ್ರಾಹಕನ ಬಯೋಮೆಟ್ರಿಕ್‌ ದತ್ತಾಂಶಗಳನ್ನು ಇನ್ನು ದೂರಸಂಪರ್ಕ ಕಂಪೆನಿಗಳು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಸಿಮ್‌ ಕಾರ್ಡ್‌ಗಳ ವಹಿವಾಟಿನಲ್ಲಿ ನಡೆಯುವ ವಂಚನೆಗಳನ್ನು ತಪ್ಪಿಸುವುದೇ ಇದರ ಉದ್ದೇಶ.

ಆದಾಯ ತೆರಿಗೆ ರಿಟರ್ನ್ಸ್
2024ರ ಜ.1ರ ಅನಂತರ ನೀವು 2022 23ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್‌) ಸಲ್ಲಿಕೆ ಮಾಡಲು ಸಾಧ್ಯವಿಲ್ಲ. ಡಿ.31ರೊಳಗೆ ಪರಿಷ್ಕೃತ ರಿಟರ್ನ್ ಸಲ್ಲಿಸುವುದಿದ್ದರೂ ಅವರು ದಂಡದ ರೂಪದಲ್ಲಿ ಶುಲ್ಕ ಕಟ್ಟಿ ಸಲ್ಲಿಸಬೇಕಾಗುತ್ತದೆ.

ನಾಮಿನೇಶನ್‌ ಮಾಹಿತಿ
ಡಿಮ್ಯಾಟ್‌ ಖಾತೆ ಹೊಂದಿರುವವರು ಜ.1ರೊಳಗೆ ತಮ್ಮ ನಾಮಿನೇಶನ್‌ ವಿವರವನ್ನು ಸಲ್ಲಿಸಬೇಕು. ಇಲ್ಲದಿದ್ದರೆ ಅಂಥವರಿಗೆ ಸೋಮವಾರದಿಂದ ಷೇರುಪೇಟೆ ವಹಿವಾಟು ನಡೆಸಲು ಸಾಧ್ಯವಿಲ್ಲ.

ಯುಪಿಐ ಐಡಿ ನಿಷ್ಕ್ರಿಯ
ನಿಮ್ಮ ಬ್ಯಾಂಕ್‌ ಖಾತೆಗಳು, ಮೊಬೈಲ್‌ ಸಂಖ್ಯೆಗಳು ಒಂದು ವರ್ಷದಿಂದ ಬಳಕೆಯಾಗದೇ ಇದ್ದರೆ, ಅವುಗಳಿಗೆ ಲಿಂಕ್‌ ಆಗಿರುವ ಯುಪಿಐ ಐಡಿಗಳು ಜ.1ರಿಂದ ನಿಷ್ಕ್ರಿಯಗೊಳ್ಳಲಿವೆ. ಅದರಂತೆ, ನಿಮಗೆ ಯುಪಿಐ ಮೂಲಕ ಯಾವುದೇ ಹಣ ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಬಳಕೆದಾರರು ತಮ್ಮ ಯುಪಿಐ ಆ್ಯಪ್‌ ಮೂಲಕ ಯಾವುದಾದರೂ ಹಣಕಾಸಿನ ಅಥವಾ ಹಣಕಾಸೇತರ(ಬ್ಯಾಲೆನ್ಸ್‌ ಚೆಕ್‌ ಮಾಡುವುದು, ಪಿನ್‌ ಬದಲಾವಣೆ ಇತ್ಯಾದಿ ) ವಹಿವಾಟು ನಡೆಸುವ ಮೂಲಕ ಈ ಐಡಿಗಳನ್ನು ಮರು ಸಕ್ರಿಯಗೊಳಿಸಬಹುದು.

ವಾಹನಗಳು ದುಬಾರಿ
ಕಚ್ಚಾವಸ್ತುಗಳ ಬೆಲೆಯೇರಿಕೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಹಲವು ವಾಹನ ಉತ್ಪಾದಕ ಕಂಪೆನಿಗಳು ಜ.1ರಿಂದ ತಮ್ಮ ವಾಹನಗಳ ದರ ಏರಿಸುವುದಾಗಿ ಘೋಷಿಸಿವೆ. ಮಾರುತಿ ಸುಜುಕಿ, ಟಾಟಾ ಮೋಟಾರ್ಸ್‌, ಮಹೀಂದ್ರಾ, ಹೋಂಡಾ, ಹ್ಯುಂಡೈ, ನಿಸ್ಸಾನ್‌, ಫೋಕ್ಸ್‌ವ್ಯಾಗನ್‌, ಸ್ಕೋಡಾ, ಎಂಜಿ ಮೋಟಾರ್ಸ್‌, ಔಡಿ, ಮರ್ಸಿಡಿಸ್‌ ಬೆನ್ಝ ಕಾರುಗಳು ದುಬಾರಿಯಾಗಲಿವೆ.

ಎಲ್‌ಪಿಜಿ ಬೆಲೆ ಪರಿಷ್ಕರಣೆ
ಪ್ರತಿ ತಿಂಗಳ ಆರಂಭದಂದು ಅಡುಗೆ ಅನಿಲ ಸಿಲಿಂಡರ್‌ ಬೆಲೆ ಪರಿಷ್ಕರಣೆಯಾಗುತ್ತದೆ. ಅದರಂತೆ, ಸೋಮವಾರ ಎಲ್‌ಪಿಜಿ ಬೆಲೆ ಏರಿಕೆಯಾಗಲೂಬಹುದು, ಇಳಿಕೆ ಆಗಲೂಬಹುದು.

Leave a Reply

error: Content is protected !!