ರೀಲ್ಸ್ ಮಾಡುವುದನ್ನು ವಿರೋಧಿಸಿದ ಗಂಡನನ್ನೇ ಮುಗಿಸಿದ ಹೆಂಡತಿ

ಶೇರ್ ಮಾಡಿ

ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವುದನ್ನು ವಿರೋಧಿಸಿದ ಗಂಡನನ್ನು ಪತ್ನಿ ತನ್ನ ಅಪ್ಪ-ಅಮ್ಮನೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ಬಿಹಾರದ ಬೇಗುಸರಾಯ್‌ನಲ್ಲಿ ನಡೆದಿದೆ.

ಭಾನುವಾರ ರಾತ್ರಿ 9 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಮೃತರನ್ನು ಮಹೇಶ್ವರ್ ಕುಮಾರ್ ಎಂದು ಗುರುತಿಸಲಾಗಿದೆ. ಇವರು ಕೋಲ್ಕತ್ತಾದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಸಮಸ್ತಿಪುರ ಜಿಲ್ಲೆಯ ನರ್ಹಾನ್ ಗ್ರಾಮದ ನಿವಾಸಿಯಾಗಿದ್ದರು. ಪತ್ನಿ ರಾಣಿ ಕುಮಾರಿಗೆ ಇನ್ಸ್ಟಾದಲ್ಲಿ ರೀಲ್ಸ್ ಮಾಡುವ ಗೀಳಿತ್ತು. ಆದರೆ ಪತಿಗೆ ಅದು ಇಷ್ಟವಿಲ್ಲದಿದ್ದರಿಂದ ಅದನ್ನು ವಿರೋಧಿಸಿದ್ದರು. ಇದರಿಂದ ಗಂಡನ ಮೇಲೆ ಕೋಪಗೊಂಡ ಹೆಂಡತಿ ತನ್ನ ಅಪ್ಪ-ಅಮ್ಮನ ಜೊತೆಗೂಡಿ ಆತನನ್ನು ಹತ್ಯೆ ಮಾಡಿದ್ದಾಳೆ.

ಮಹೇಶ್ವರ್ ಕೆಲ ದಿನಗಳ ಹಿಂದೆ ಕೋಲ್ಕತ್ತಾದಿಂದ ತನ್ನ ಗ್ರಾಮಕ್ಕೆ ತೆರಳಿದ್ದರು. ಫಫೌತ್ ಗ್ರಾಮದವರಾದ ರಾಣಿ ಕುಮಾರಿ ಸುಮಾರು 7 ವರ್ಷಗಳ ಹಿಂದೆ ಮಹೇಶ್ವರ್ ಅವರನ್ನು ವಿವಾಹವಾಗಿದ್ದರು. ಮಹೇಶ್ವರ್ ಕೆಲಸಕ್ಕೆ ತೆರಳುವ ಮೊದಲು ಫಫೌತ್ ಗ್ರಾಮದಲ್ಲಿರುವ ತನ್ನ ಅತ್ತೆಯ ಮನೆಗೆ ಹೋಗಿದ್ದರು ಎಂದು ತಿಳಿದುಬಂದಿದೆ. ಇನ್ಸ್ಟಾಗ್ರಾಂ ರೀಲ್ಸ್ ವಿಚಾರವಾಗಿ ಮಹೇಶ್ವರ್ ಮತ್ತು ರಾಣಿ ಕುಮಾರಿ ನಡುವೆ ವಾಗ್ವಾದ ನಡೆದಿದ್ದು, ಇವರಿಬ್ಬರ ಜಗಳ ವಿಕೋಪಕ್ಕೆ ತಿರುಗಿ ಪತ್ನಿ ತನ್ನ ಅಪ್ಪ-ಅಮ್ಮನ ಸಹಾಯದಿಂದ ಗಂಡನ ಕತ್ತು ಹಿಸುಕಿ ಸಾಯಿಸಿದ್ದಾಳೆ. ರಾತ್ರಿಯ ವೇಳೆ ಮೃತನ ಸಹೋದರ ಕೋಲ್ಕತ್ತಾದಿಂದ ಕರೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಕರೆ ಮಾಡಿದ ವೇಳೆ ಬೇರೊಬ್ಬರು ಫೋನ್ ಸ್ವೀಕರಿಸಿದ್ದರಿಂದ ಅನುಮಾನಗೊಂಡ ಸಹೋದರ ತನ್ನ ತಂದೆಗೆ ಕರೆ ಮಾಡಿ ಅಲ್ಲಿ ಹೋಗಿ ನೋಡುವಂತೆ ಕೇಳಿಕೊಂಡಿದ್ದಾನೆ.

ತಂದೆ ಹೋಗಿ ನೋಡಿದಾಗ ಮಗ ಸತ್ತು ಬಿದ್ದಿರುವುದು ಕಂಡುಬಂದಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತದೇಹವನ್ನು ತಮ್ಮ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಹೇಶ್ವರ್ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪೊಲೀಸರು ಮೃತರ ಪತ್ನಿಯನ್ನು ಬಂಧಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

error: Content is protected !!