ಉಜಿರೆ: ನನ್ನೊಳಗಿನ ಅರಿವು ನನಗಾಗಬೇಕು. ಆಗ ಇನ್ನೊಬ್ಬರಿಗೆ ಸ್ಪಂದಿಸುವ ಗುಣ ಬರುತ್ತದೆ. ನಮ್ಮ ವಿಚಾರಗಳಲ್ಲಿ ನಮ್ಮತನವನ್ನು ತೋರಿಸಬೇಕು. ವಿದ್ಯೆ ಇದ್ದವರನ್ನು ಗೌರವಿಸುವ, ಪರಿಸರ, ಭೂಮಿ ತಾಯಿಗೆ ಹಾಗೆಯೇ ನಮ್ಮ ಮಾತಿಗೆ ನಾವೇ ಗೌರವ ಕೊಡುವುದನ್ನು ಯಾವಾಗ ನಾವು ಕಲಿಯುತ್ತೇವೆಯೋ ಆಗ ಪರಿಪೂರ್ಣತೆ ಹೊಂದುತ್ತೇವೆ. ಸ್ವಯಂ ಸೇವಕ ತನ್ನನ್ನು ತಾನು ಉದ್ದರಿಸಿಕೊಳ್ಳಬೇಕು. ಅದರೊಂದಿಗೆ ಸಮಾಜದ ಕಷ್ಟಗಳಿಗೆ ಧ್ವನಿಯಾಗುವವನೆ ನಿಜವಾದ ಸ್ವಯಂ ಸೇವಕ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಾಕ್ತನ ಯೋಜನಾಧಿಕಾರಿ ಗಣೇಶ ಶೆಂಡ್ಯೆ ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಕಾರ್ಯ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಕ್ತನ ಸಹ ಯೋಜನಾಧಿಕಾರಿ ಚೇತನಾ ಕುಮಾರಿ , ಪ್ರಾಕ್ತನ ಲೆಕ್ಕ ಪತ್ರಾಧಿಕಾರಿ ಪದ್ಮಕುಮಾರ್ ಹಾಗೂ ರಾಷ್ಟ್ರೀಯ ಭಾವೈಕ್ಯ ಶಿಬಿರದಲ್ಲಿ ಭಾಗವಹಿಸಿದ ಘಟಕದ ನಾಯಕ ಸುದರ್ಶನ ನಾಯಕ್ ಇವರನ್ನು ಸನ್ಮಾನಿಸಲಾಯಿತು. ರಾಜ್ಯಮಟ್ಟದ ಗಣರಾಜ್ಯೋತ್ಸವ ಪೆರೇಡ್ ಗೆ ಆಯ್ಕೆ ಆದ ವಿನುತಾ ಆರ್ ನಾಯ್ಕ್ ಅವರನ್ನು ಗೌರವಿಸಲಾಯಿತು.
ದಕ್ಷಾ ಹಾಗೂ ಸುದರ್ಶನ ನಾಯಕ್ ಅವರಿಗೆ ಉತ್ತಮ ನಾಯಕರು ಹಾಗೆಯೇ ಮಹಾಲಕ್ಷ್ಮೀ, ಸೃಷ್ಠಿ ಎಸ್ ಎಲ್, ಸರಣ್ಯಾ, ಪಲ್ಲವಿ ಎನ್, ಸಿದ್ಧಾಂತ ಶೆಟ್ಟಿ, ಅನ್ವೇಶ್, ನಿರಂತ ಸಾಗರ್ ಜೈನ್ ಹಾಗೂ ಪ್ರಥಮ್ ಇವರಿಗೆ ಉತ್ತಮ ಸ್ವಯಂ ಸೇವಕ ಬಹುಮಾನ ನೀಡಿ ಗೌರವಿಸಲಾಯಿತು.
ರಾ.ಸೇ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್, ಹಿರಿಯ ವಿದ್ಯಾರ್ಥಿ ಸ್ವಯಂ ಸೇವಕ ಶಶಿಧರ ಶೆಟ್ಟಿ ಉಪಸ್ಥಿತರಿದ್ದರು. ಘಟಕದ ನಾಯಕ ಸುದರ್ಶನ ನಾಯಕ್ ವಾರ್ಷಿಕ ವರದಿ ಮಂಡಿಸಿದರು. ಸ್ವಯಂ ಸೇವಕರಾದ ಬೋರೇಶ್ ಹಾಗೂ ವಿನುತಾ ನಾಯ್ಕ್ ಅನಿಸಿಕೆ ವ್ಯಕ್ತಪಡಿಸಿದರು. ಪ್ರಾಪ್ತಿ ಸ್ವಾಗತಿಸಿ, ಹರ್ಷಿತಾ ಪರಿಚಯಿಸಿದರು. ಸಾಕ್ಷಿ ನಿರೂಪಿಸಿ, ದಕ್ಷಾ ವಂದಿಸಿದರು.
ಈ ಸಂದರ್ಭದಲ್ಲಿ ಸ್ವಯಂ ಸೇವಕರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.