ಅರ್ಧದಲ್ಲಿ ಬಸ್‌ನಿಂದ ಇಳಿಸಿದ ಪ್ರಕರಣ; ಹಿರಿಯ ನಾಗರಿಕನಿಂದ ಮಾಹಿತಿ ಪಡೆದ ಪೊಲೀಸರು

ಶೇರ್ ಮಾಡಿ

ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಕೆಎಸ್ಸಾರ್ಟಿಸಿ ಬಸ್‌ನಿಂದ ಹಿರಿಯ ನಾಗರಿಕರೋರ್ವರನ್ನು ಮಾರ್ಗ ಮಧ್ಯೆ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸರು ಹಿರಿಯ ನಾಗರಿಕ ವ್ಯಕ್ತಿಯ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಕಡಬ ತಾಲೂಕಿನ ಕಲ್ಲುಗುಡ್ಡೆಯಿಂದ ಕಾಂಚನಕ್ಕೆ ತೆರಳಲು ಶನಿವಾರ ಬಸ್‌ ಏರಿದ್ದ ನೂಜಿಬಾಳ್ತಿಲದ ಬಾಬು ಗೌಡ ಅವರನ್ನು 200 ರೂಪಾಯಿಗೆ ಚಿಲ್ಲರೆ ಇಲ್ಲ ಎಂದು ಬಸ್‌ ನಿರ್ವಾಹಕ ಗೋಳಿಯಡ್ಕದಲ್ಲಿ ಕೆಳಗಿಳಿಸಿದ್ದ ಎಂದು ಆರೋಪಿಸಲಾಗಿತ್ತು. ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಮಾಹಿತಿಯಂತೆ ಹಿರಿಯ ನಾಗರಿಕರು ಎಂಬನೆಲೆಯಲ್ಲಿ ಕಡಬ ಠಾಣೆಯ ತನಿಖಾ ಉಪನಿರೀಕ್ಷಕ ಅಕ್ಷಯ ಡವಗಿ, ಸಿಬಂದಿ ಭವಿತ್‌ ರೈ, ವಿನೋದ್‌ ಅವರು ಬಾಬು ಗೌಡರ ಮನೆಗೆ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದುಕೊಂಡರು.

ಬಾಬು ಅವರು ಈಗಾಗಲೇ ಗ್ರಾ.ಪಂ.ಗೆ ದೂರು ನೀಡಿದ್ದು, ಅಲ್ಲಿಂದ ಕೆಎಸ್ಸಾರ್ಟಿಸಿಗೆ ದೂರು ಸಲ್ಲಿಕೆಯಾಗಲಿದೆ ಎನ್ನಲಾಗಿದೆ. ಪೊಲೀಸರು ಕೂಡ ಪಡೆದ ಮಾಹಿತಿಯನ್ನು ಕೆಎಸ್ಸಾರ್ಟಿಸಿಗೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Leave a Reply

error: Content is protected !!