ನನಗೆ 92 ವಯಸ್ಸಾಯ್ತು.. ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ: ಹೆಚ್‌ಡಿಡಿ

ಶೇರ್ ಮಾಡಿ

ನಾನು ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡೊಲ್ಲ ಎಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನನಗೆ 92 ವರ್ಷ ವಯಸ್ಸು ಆಯ್ತು. ಇನ್ನು ಎರಡೂವರೆ ವರ್ಷ ರಾಜ್ಯಸಭೆ ಅವಧಿ ಇದೆ. ನನಗೆ ಅಷ್ಟೆ ಸಾಕು. ಬಿಜೆಪಿ ಜೊತೆ ಮೈತ್ರಿ ಆಗಿದೆ. ಚುನಾವಣೆ ಪ್ರಚಾರಕ್ಕೆ ಯಾರೇ ಕರೆದರೂ ಹೋಗಿ ಅಲ್ಲಿಗೆ ಪ್ರಚಾರ ಮಾಡ್ತೀನಿ ಎಂದು ತಿಳಿಸಿದ್ದಾರೆ.

ರಾಮಮಂದಿರ ಪ್ರತಿಷ್ಠಾಪನೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಡ್ತಿರೋ ವ್ರತಕ್ಕೆ ಮಾಜಿ ಪ್ರಧಾನಿ ದೇವೇಗೌಡ ಶ್ಲಾಘಿಸಿದ್ದಾರೆ. ಜೆಪಿ ಭವನದಲ್ಲಿ ಮಾತನಾಡಿದ ಅವರು, ಮೋದಿಯವರು ಪುಣ್ಯ ಮಾಡಿಕೊಂಡು ಬಂದಿದ್ದಾರೆ. ಶಿಸ್ತಿನಿಂದ ರಾಮಪ್ರತಿಷ್ಠಾಪನೆ ಕಾರ್ಯಕ್ರಮ ಮಾಡ್ತಿದ್ದಾರೆ. 11 ದಿನ ನಿಷ್ಠೆಯಿಂದ, ಬದ್ಧತೆಯಿಂದ, ಶ್ರದ್ಧೆಯಿಂದ ಅವರು ವೃತ ಮಾಡ್ತಿದ್ದಾರೆ. ನಾನು ಕೂಡಾ ಇಂತಹ ವ್ರತ ಮಾಡಿರಲಿಲ್ಲ. ಮೋದಿಗೆ ಒಂದು ದೈವ ಶಕ್ತಿ ಇದೆ. ಸೀತಾ ಅಪಹರಣವಾದ ಸ್ಥಳದಿಂದ ವ್ರತ ಶುರು ಮಾಡಿದ್ದು, ಇದು ಅವರ ಪುಣ್ಯದಿಂದ ಆಗಿದೆ ಎಂದು ರಾಮಮಂದಿರ ಕಾರ್ಯಕ್ರಮಕ್ಕೆ ಮೋದಿಯವರ ಭಕ್ತಿಯನ್ನು ಹಾಡಿ ಹೊಗಳಿದ್ದಾರೆ. ರಾಮಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ನಾನು 99% ಹೋಗುತ್ತೇನೆ. ಶ್ರೀಮತಿಯವರನ್ನು ಕರೆದುಕೊಂಡು ಹೋಗುತ್ತೇನೆ ಎಂದಿದ್ದಾರೆ.

ಹಾಸನದಿಂದ ಪ್ರಜ್ವಲ್ ರೇವಣ್ಣರವರೇ ಸ್ಪರ್ಧೆ ಮಾಡುತ್ತಾರೆ ಅಂತಾ ಮಾಜಿ ಪ್ರಧಾನಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಹಾಸನದಲ್ಲಿ ಪ್ರಜ್ವಲ್‌ಗೆ ವಿರೋಧ ಇದೆ. ಹೀಗಾಗಿ ಪ್ರಜ್ವಲ್ ಸ್ಪರ್ಧೆ ಮಾಡ್ತಾರಾ ಅಥವಾ ಡಾ. ಮಂಜುನಾಥ್ ಸ್ಪರ್ಧೆ ಮಾಡ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ಪುರಸಭೆ ಸ್ಥಾನ ಸೋತಿದ್ದಕ್ಕೆ ಹೀಗೆ ಮಾತಾಡೋದು ಸರಿಯಲ್ಲ.ಪ್ರಜ್ವಲ್‌ಗೆ ಮೋದಿ ಅವರು ಆಶೀರ್ವಾದ ಮಾಡ್ತಾರೆ. ಅವರು ತಳ್ಳಿ ಹಾಕೊಲ್ಲ. ಕುಮಾರಸ್ವಾಮಿ ಕೂಡಾ ಆಶೀರ್ವಾದ ಮಾಡ್ತಾರೆ. ನಾನು ಕೂಡಾ ಆಶೀರ್ವಾದ ಮಾಡಿದ್ದೀನಿ ಎನ್ನುವ ಮೂಲಕ ಹಾನಸಕ್ಕೆ ಪ್ರಜ್ವಲ್ ಸ್ಪರ್ಧೆ ಫಿಕ್ಸ್ ಎಂದು ತಿಳಿಸಿದ್ದಾರೆ.

ಕುಮಾರಸ್ವಾಮಿ ಕೇಂದ್ರ ಮಂತ್ರಿ ಆಗುವ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಮುಂದೆ ಆ ಬಗ್ಗೆ ಚರ್ಚೆ ಆಗಿಲ್ಲ. ಆದರೆ ಮೋದಿ ಅವರ ಮನಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಒಂದು ಬಾರಿ ಸಂಸತ್ ಸದಸ್ಯ ಆದವರನ್ನು ಮಂತ್ರಿ ಮೋದಿ ಮಾಡಿದ್ದಾರೆ. ಮೋದಿ ಅವರ ಆ್ಯಕ್ಷನ್ ಪ್ಲ್ಯಾನ್ ಅವರ ಸಹೋದ್ಯೋಗಿಗಳಿಗೂ ಗೊತ್ತಾಗೊಲ್ಲ. ಹೀಗಾಗಿ ಅವರ ಮನಸಿನಲ್ಲಿ ಏನಿದೆಯೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

Leave a Reply

error: Content is protected !!