ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಅಜ್ಜ…ಆಂಬುಲೆನ್ಸ್‌ ರಸ್ತೆಗುಂಡಿಗೆ ಬಿದ್ದ ಬಳಿಕ ಜೀವಂತ!

ಶೇರ್ ಮಾಡಿ

ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿ ಆಸರೆ ಎಂಬ ಗಾದೆ ಮಾತೊಂದಿದೆ. ಆದರೆ ಹರ್ಯಾಣದಲ್ಲೊಂದು ಅಚ್ಚರಿಯ ಘಟನೆಯೊಂದು ನಡೆದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ 80 ವರ್ಷದ ಅಜ್ಜ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ ನಂತರ, ಕುಟುಂಬ ಸದಸ್ಯರು ಶವವನ್ನು ಆಂಬುಲೆನ್ಸ್‌ ನಲ್ಲಿ ಪಂಜಾಬ್‌ ನ ಕರ್ನಲ್‌ ಗೆ ಕರೆದೊಯ್ಯುತ್ತಿದ್ದ ವೇಳೆ ಆಂಬುಲೆನ್ಸ್‌ ರಸ್ತೆಯಲ್ಲಿನ ದೊಡ್ಡ ಗುಂಡಿಗೆ ಹಾರಿತ್ತು…ತಕ್ಷಣವೇ ಆಂಬುಲೆನ್ಸ್‌ ನೊಳಗಿದ್ದ ಅಜ್ಜ ಉಸಿರಾಡಲು ಆರಂಭಿಸಿದ್ದರು!

ಈ ವ್ಯಕ್ತಿಯನ್ನು ದರ್ಶನ್‌ ಸಿಂಗ್‌ ಬ್ರಯಾರ್‌ ಎಂದು ಗುರುತಿಸಲಾಗಿದೆ. ಆಂಬುಲೆನ್ಸ್‌ ಗುಂಡಿಗೆ ಬಿದ್ದ ನಂತರ ಉಸಿರಾಟಲು ಆರಂಭಿಸಿದ ಅಜ್ಜನನ್ನು ಕರ್ನಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಪಂಜಾಬ್‌ ನ ಕರ್ನಲ್‌ ನಲ್ಲಿರುವ ಸಿಂಗ್‌ ಮನೆಯಲ್ಲಿ ಕುಟುಂಬ ಸದಸ್ಯರು ಒಟ್ಟುಗೂಡಿ ಅಂತ್ಯಸಂಸ್ಕಾರ ನಡೆಸಲು ಸಿದ್ಧತೆ ನಡೆಸುತ್ತಿದ್ದರು. ಏತನ್ಮಧ್ಯೆ ಆಂಬುಲೆನ್ಸ್‌ ರಸ್ತೆ ಗುಂಡಿಗೆ ಬಿದ್ದ ನಂತರ ಅಜ್ಜ ಕೈ ಅಲುಗಾಡಿಸುತ್ತಿರುವುದನ್ನು ಗಮನಿಸಿದ ಮೊಮ್ಮಗ ನಾಡಿಮಿಡಿತ ಪರೀಕ್ಷಿಸಿದ್ದ. ಆಗ ನಾಡಿ ಮತ್ತು ಹೃದಯ ಬಡಿತ ಕೇಳಿಸಿಕೊಂಡಿದ್ದು, ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಂತೆ ಆಂಬುಲೆನ್ಸ್‌ ಚಾಲಕನಿಗೆ ಮೊಮ್ಮಗ ಹೇಳಿರುವುದಾಗಿ ವರದಿ ವಿವರಿಸಿದೆ.

ಕೆಲವು ದಿನಗಳ ಹಿಂದೆ 80 ವರ್ಷದ ಸಿಂಗ್‌ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ಪಟಿಯಾಲಾದ ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂದರ್ಭದಲ್ಲಿ ವೆಂಟಿಲೇಟರ್‌ ನಲ್ಲಿಟ್ಟು ಚಿಕಿತ್ಸೆ ನೀಡಿದ್ದು, ಗುರುವಾರ ಬೆಳಗ್ಗೆ ಸಿಂಗ್‌ ನಿಧನರಾಗಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಮೊಮ್ಮಗ ಬಲ್ವಾನ್‌ ಸಿಂಗ್‌ ಎನ್‌ ಡಿಟಿವಿಗೆ ಪ್ರತಿಕ್ರಿಯೆ ನೀಡಿರುವುದಾಗಿ ವರದಿಯಾಗಿದೆ.

ಗುರುವಾರ ಬೆಳಗ್ಗೆ ಕುಟುಂಬ ಸದಸ್ಯರಿಗೆ ಕರೆ ಮಾಡಿ, ಅಜ್ಜ ತೀರಿಕೊಂಡಿದ್ದು, ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡುವಂತೆ ತಿಳಿಸಲಾಗಿತ್ತು. ಇದೀಗ ಅಜ್ಜ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮರುಜನ್ಮ ಪಡೆದಿರುವುದಾಗಿ ಬಲ್ವಾನ್‌ ಸಿಂಗ್‌ ತಿಳಿಸಿದ್ದಾನೆ.

Leave a Reply

error: Content is protected !!