ವಿಧಾನಸಭೆ ಚುನಾವಣೆಯ ಟಿಕೆಟ್ ಸಿಗದಿದ್ದಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧ ಸಿಡಿದೆದ್ದು ಕಾಂಗ್ರೆಸ್ ಸೇರಿದ್ದು, ಇದೀಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರು ಮತ್ತೆ ವಾಪಸ್ ಬಿಜೆಪಿಗೆ ವಾಪಸ್ ಆಗಲಿದ್ದಾರೆ ಎನ್ನುವ ಸುದ್ದಿಗ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಇದೀಗ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ, ನನ್ನನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಬೇಕೆಂಬುದು ಹಲವು ನಾಯಕರ ಒತ್ತಾಸೆ. ಆದ್ರೆ ಘರ್ ವಾಪ್ಸಿ ಪ್ರಶ್ನೆಯೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಬೇಕೆಂದು ಹಲವು ನಾಯಕರ ಒತ್ತಾಸೆಯಾಗಿದೆ. ನನಗೆ ಆಗಿರೋ ಅಪಮಾನವನ್ನು ನಾನು ಇನ್ನೂ ಮರೆತಿಲ್ಲ. ನಾನು ಬಿಜೆಪಿ ತೊರೆದ ನಂತರ ಆಗಿರುವ ಹಾನಿ ಬಗ್ಗೆ ಅವರಿಗೆ ಮನವರಿಕೆಯಾಗಿದೆ. ಈ ನಿಟ್ಟಿನಲ್ಲಿ ಕೆಲವರು ನನ್ನನ್ನು ವಾಪಸ್ ಕರೆತರುವ ಪ್ರಯತ್ನದಲ್ಲಿ ಇದ್ದಾರೆ. ಆದರೆ ಹಲವಾರು ನಾಯಕರು ವಾಪಸ್ ತರುವಂತೆ ಒತ್ತಡ ಹಾಕ್ತಿರೋ ಮಾಹಿತಿ ಇದೆ. ಯಾರು ಏನೇ ಪ್ರಯತ್ನ ಮಾಡಿದರೂ ನಾನು ಬಿಜೆಪಿಗೆ ವಾಪಾಸ್ಸಾಗಲ್ಲ. ಯಾವುದೇ ಕಾರಣಕ್ಕೂ ನಾನು ಬಿಜೆಪಿಗೆ ಮತ್ತೆ ವಾಪಸಾಗುವುದಿಲ್ಲ. ಘರ್ ವಾಪ್ಸಿ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅನಂತ್ ಕುಮಾರ್ ಹೆಗಡೆ ಹದ್ದು ಮೀರಿ ವರ್ತಿಸುತ್ತಿದ್ದಾರೆ
ಇನ್ನು ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಅನಂತಕುಮಾರ್ ಹೆಗಡೆ ಏಕವಚನದಲ್ಲಿ ಮಾತನಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಅನಂತ್ ಕುಮಾರ್ ಹೆಗಡೆ ಹದ್ದು ಮೀರಿ ವರ್ತಿಸುತ್ತಿದ್ದಾರೆ. ಲಕ್ಷ್ಮಣ ರೇಖೆ ದಾಟಿ ಮಾತನಾಡುತ್ತಿದ್ದಾರೆ. ಇಷ್ಟುದಿನ ನಾಪತ್ತೆಯಾದವರು ಈಗ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ತುಂಬಾ ಆಕ್ಟಿವ್ ಆಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ತಮ್ಮ ಜಿಲ್ಲೆಗೆ ಬಂದಾಗ ಇವರು ಎಲ್ಲಿ ಹೋಗಿದ್ದರು? ಈಗ ಬಂದು ಬಾಯಿಗೆ ಬಂದಂತೆ ಮಾತಾಡ್ತಿದ್ದಾರೆ. ಸಂವಿಧಾನಿಕ ಹುದ್ದೆಯಲ್ಲಿದ್ದವರ ಮೇಲೆ ಈ ರೀತಿ ಮಾತಾಡೋದು ಸರಿಯಲ್ಲ. ಪ್ರಧಾನಿ ಮೋದಿ ಬಗ್ಗೆ ಈ ರೀತಿ ಮಾತನಾಡಿದರೆ ಸುಮ್ಮನೆ ಇರುತ್ತಾರಾ? ಎಂದು ಪ್ರಶ್ನಿಸಿದರು.
ಆಪರೇಷನ್ ಹಸ್ತ ಬಗ್ಗೆ ಶೆಟ್ಟರ್ ಮಾತು
ಕೆಲವು ಬಿಜೆಪಿ ನಾಯಕರನ್ನು ಕಾಂಗ್ರೆಸ್ಗೆ ಸೇರಿಸುವ ಬಗ್ಗೆ ಚರ್ಚೆ ವಿಚಾರವಾಗಿ ಮಾತನಾಡಿ, ನಾನು ಯಾವತ್ತೂ ಆಪರೇಷನ್ ಮಾಡಿಲ್ಲ. ಅವರಾಗಿಯೇ ಕಾಂಗ್ರೆಸ್ ಸೇರುತ್ತೇನೆ ಅಂದರಷ್ಟೇ ಸ್ವಾಗತ ಮಾಡುತ್ತೇನೆ. ಯಾವ ಬಿಜೆಪಿ ನಾಯಕರನ್ನು ಕಾಂಗ್ರೆಸ್ಗೆ ಸೇರಿಸುವ ಕೆಲಸ ಮಾಡಿಲ್ಲ ತಾವಾಗಿ ಬಂದವರನ್ನು ಸಿಎಂ, ಡಿಸಿಎಂಗೆ ಭೇಟಿ ಮಾಡಿಸಿದ್ದೇನೆ. ಆಪರೇಷನ್ ಅಂತಾರಲ್ಲ ಆ ರೀತಿ ನಾನು ಯಾವತ್ತೂ ಮಾಡಿಲ್ಲ. ಶಂಕರಪಾಟೀಲ ಮುನೇನಕೊಪ್ಪ ನಿರ್ಧಾರ ಬಗ್ಗೆ ಅವರೇ ಹೇಳಬೇಕು. ಮುನೇನಕೊಪ್ಪ ಜೊತೆ ನಾನು ಈವರೆಗೆ ಮಾತನಾಡಿಲ್ಲ ಎಂದು ಹೇಳಿದರು.