ಉಜಿರೆಯಿಂದ ಬೆಳ್ತಂಗಡಿಗೆ ಸಾಗುವ ರಾಷ್ಟ್ರೀಯ ಹೆದ್ದಾರಿ 73ರ ಗಾಂಧೀನಗರ ರಸ್ತೆಯ ತಿರುವು ಬಳಿ ರವಿವಾರ ಮಧ್ಯಾಹ್ನ ಲಾರಿಯಡಿಗೆ ಸಿಲುಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.
ಉಜಿರೆ ಸಮೀಪದ ಗಾಂಧಿನಗರ ಕಕ್ಕೆಜಾಲು ನಿವಾಸಿ ಕೃಷ್ಣಪ್ಪ (52), ಕುಂಟಿನಿ ನಿವಾಸಿ ಮೋಹಿನಿ (56) ಮೃತಪಟ್ಟವರು.
ಲಾರಿ ಚಾಲಕನ ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಯಿಂದಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಉಜಿರೆಯಿಂದ ಬೆಳ್ತಂಗಡಿಗೆ ಬರುವ ಅಪಾಯಕಾರಿ ತಿರುವು ರಸ್ತೆಯಾಗಿದ್ದರಿಂದ ಇಲ್ಲಿ ವಾಹನ ಸವಾರರು ವೇಗವಾಗಿ ಬಂದಲ್ಲಿ ನಿಯಂತ್ರಣ ಆಸಾಧ್ಯವಾಗಿದೆ. ಅದೇ ರೀತಿ ಲಾರಿ ಚಾಲಕ ಅತಿವೇಗದಿಂದ ಬಂದ ಪರಿಣಾಮ ಬಸ್‌ಗೆಂದು ಕಾಯುತ್ತಿದ್ದ ಇಬ್ಬರು ಲಾರಿಯಡಿ ಸಿಲುಕಿದ್ದಾರೆ. ಲಾರಿಯು ವೃತ್ತದಲ್ಲಿದ್ದ ವಿದ್ಯುತ್ ಕಂಬಕ್ಕೆ, 3 ಅಂಗಡಿ ಕೋಣೆಗಳಿಗೆ ಢಿಕ್ಕಿ ಹೊಡೆದು ಬಳಿಕ ಸಮೀಪದ ಮನೆಯೊಂದರ ಕಾಂಪೌಂಡ್‌ಗೆ ತಾಗಿಕೊಂಡು ಎದುರು ಬದಿಯ ವಿದ್ಯುತ್ ಕಂಬಕ್ಕೆ ಮತ್ತೆ ಢಿಕ್ಕಿ ಹೊಡೆದು ನಿಂತಿದೆ. ರವಿವಾರವಾದ್ದರಿಂದ ಅಂಗಡಿ ಮುಂಗಟ್ಟು ಬಂದ್ ಇದ್ದ ಕಾರಣ ಗಂಭೀರ ಸ್ವರೂಪದ ಅಪಘಾತ ತಪ್ಪಿದೆ.
ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ತತ್‌ಕ್ಷಣ ಸಂಚಾರ ಪೊಲೀಸರು ಆಗಮಿಸಿ ಸೂಕ್ತ ಕ್ರಮ ಕೈಗೊಂಡರು. ಟಿಬಿ ಕ್ರಾಸ್, ಸುರ್ಯ ರಸ್ತೆಯ ಮೂಲಕ ಉಜಿರೆಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಳಿಕ ಲಾರಿಯನ್ನು ಕ್ರೇನ್ ಸಹಾಯದಿಂದ ಸ್ಥಳಾಂತರಿಸಿ ಸಂಚಾರ ಸುಗಮಗೊಳಿಸಲಾಯಿತು. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಚಾಲಕನ ಮೇಲೆ ಎರಗಿದ ಘಟನೆ ನಡೆಯಿತು.
ಲಾರಿ ಚಾಲಕನನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಾಗಿದೆ.