ನೆಲ್ಯಾಡಿ: ದ.ಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ನೆಲ್ಯಾಡಿ ಪೇಟೆಯ ಹೈವೇ ಡಿವೈಡರ್ ತೆರವು, ಫ್ಲೈ ಓವರ್ ರಚನೆ ಬಗ್ಗೆ ಮನವಿ

ಶೇರ್ ಮಾಡಿ

ಚತುಷ್ಪಥ ಕಾಮಗಾರಿ ಹಿನ್ನೆಲೆಯಲ್ಲಿ ನೆಲ್ಯಾಡಿ ಪೇಟೆಯಲ್ಲಿ ನಿರ್ಮಾಣಗೊಂಡಿರುವ ಎತ್ತರಿಸಿದ ರಸ್ತೆಗಾಗಿ ನಿರ್ಮಾಣ ಮಾಡಿರುವ ಗೋಡೆಯ ಮಧ್ಯೆ ತೆರವು ಮಾಡಿ ತಾತ್ಕಾಲಿಕವಾಗಿ ಸಾರ್ವಜನಿಕರು ಸಂಚರಿಸುವಂತೆ ವ್ಯವಸ್ಥೆ ಮಾಡಿಕೊಡುವಂತೆ ಹಾಗೂ ನೆಲ್ಯಾಡಿ ಪೇಟೆಯ ಉಳಿವಿಗಾಗಿ ಫ್ಲೈ ಓವರ್ ರಚನೆ ಮಾಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಸಂಬಂಧ ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಯಿಂದ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಫೆ.9ರಂದು ಮನವಿ ಸಲ್ಲಿಸಲಾಯಿತು.

ಚತುಷ್ಪಥ ಕಾಮಗಾರಿಯಿಂದ ನೆಲ್ಯಾಡಿ ಪೇಟೆಯ ಮಧ್ಯೆ ಡಿವೈಡರ್ ಹಾದು ಹೋಗಿರುವುದರಿಂದ ದೈನಂದಿನ ವ್ಯವಹಾರಕ್ಕೆ ತೊಂದರೆಯಾಗಿದೆ. ನೆಲ್ಯಾಡಿಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಆಗ್ರಹಿಸಿ ಮನವಿ, ಪ್ರತಿಭಟನೆ ನಡೆಸಿರುವುದರಿಂದ ಡಿವೈಡರ್ ಕಾಮಗಾರಿ ಅರ್ಧದಲ್ಲಿ ನಿಂತಿದೆ. ಇದರಿಂದಾಗಿ ಪೇಟೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಸಂಚರಿಸಲು ಗ್ರಾಹಕರಿಗೆ ಸಾಧ್ಯವಾಗದೆ ಪರದಾಡುವಂತೆ ಆಗಿದೆ. ಆದ್ದರಿಂದ ನೆಲ್ಯಾಡಿ ಪೇಟೆಯ ಭವಿಷ್ಯದ ದೃಷ್ಟಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೆಲ್ಯಾಡಿ ಪೇಟೆಯ ಮಧ್ಯೆ ಡಿವೈಡರ್ ನಿರ್ಮಾಣ ಮಾಡಿರುವುದನ್ನು ಒಂದೆರಡು ಕಡೆ ತಕ್ಷಣ ತೆರವು ಮಾಡಿ ಕೊಡುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡುವಂತೆ ಹಾಗೂ ಡಿವೈಡರ್ ತೆರವು ಮಾಡಿ ನೆಲ್ಯಾಡಿ ಪೇಟೆಯ ಉಳಿವಿಗಾಗಿ ಪಿಲ್ಲರ್ ಬಳಸಿ ಫ್ಲೈ ಓವರ್ ಮಾಡಿಕೊಡುವ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆಯೂ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಸಚಿವರು ಮುಖ್ಯಮಂತ್ರಿಗಳಿಂದ ಪತ್ರ ಬರೆಯುವ ಬಗ್ಗೆ ಹಾಗೂ ಸಂಬಂಧಪಟ್ಟ ಅಧಿಕಾರಿ ವರ್ಗದವರಿಗೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸುವುದಾಗಿ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ ವಿನಯ ರಾಜ್, ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಎ.ಕೆ.ವರ್ಗೀಸ್, ಉಪಾಧ್ಯಕ್ಷರಾದ ಸರ್ವೋತ್ತಮ ಗೌಡ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಸಿ.ಹೆಚ್., ಜೊತೆ ಕಾರ್ಯದರ್ಶಿ ಉಷಾ ಅಂಚನ್, ಕೋಶಾಧಿಕಾರಿ ಸತೀಶ್.ಕೆ ದುರ್ಗಾಶ್ರೀ, ನಾಝೀಂ ಸಾಹೇಬ್ ನೆಲ್ಯಾಡಿ, ಹಿರಿಯ ಕಾಂಗ್ರೆಸ್ ಮುಖಂಡರಾದ ಪಿ.ಪಿ.ವರ್ಗೀಸ್, ಕೆ.ಪಿ.ತೋಮಸ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

error: Content is protected !!