ಕಾಪಿನಬಾಗಿಲು: ತಾವು ವಾಸಿಸುತ್ತಿರುವ ಮನೆಯನ್ನು ತೆರವುಗೊಳಿಸುವಂತೆ ನ್ಯಾಯಾಲಯದಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಕೌಕ್ರಾಡಿಯ ವೃದ್ಧ ದಂಪತಿ ತಮಗೆ ದಯಾಮರಣ ಕರುಣಿಸುವಂತೆ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ!
ರಾಧಮ್ಮ-ಮುತ್ತುಸ್ವಾಮಿ ದಂಪತಿ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಸರಕಾರಿ ಜಾಗದಲ್ಲಿ 6 ವರ್ಷಗಳಿಂದ ವಾಸವಾಗಿದ್ದಾರೆ.ಚಿತ್ರದುರ್ಗದಲ್ಲಿ ಹುಟ್ಟಿ ಬೆಳೆದಿರುವ ಅವರು 6 ವರ್ಷಗಳ ಹಿಂದೆ ಕೆಲಸಕ್ಕಾಗಿ ಆಗಮಿಸಿ, ಕೌಕ್ರಾಡಿಯಲ್ಲೇ ಕೂಲಿ ಕೆಲಸ ಮಾಡುತ್ತಾ ನೆಲೆಸಿ ತಮ್ಮದೇ ಮನೆ ಬೇಕೆಂಬ ಕನಸು ಕಂಡು ತಾವು ಕೂಡಿಟ್ಟ ಸುಮಾರು 50 ಸಾವಿರ ರೂ.ಗಳನ್ನು ಸ್ಥಳೀಯ ವ್ಯಕ್ತಿಯೊಬ್ಬರಿಗೆ ನೀಡಿ ಅವರ ವಶದಲ್ಲಿದ್ದ ಸರಕಾರಿ ಜಾಗವನ್ನು ತೆಗೆದುಕೊಂಡು ಅಲ್ಲಿ ಗುಡಿಸಲು ನಿರ್ಮಿಸಿ ದನಕರುಗಳನ್ನು ಸಾಕುತ್ತಾ ಜೀವನ ಸಾಗಿಸುತ್ತಿದ್ದರು. 2 ವರ್ಷಗಳ ಹಿಂದೆ ತಾವು ವಾಸ್ತವ್ಯ ಇರುವ ಜಾಗಕ್ಕೆ ಹಕ್ಕುಪತ್ರ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಕಂದಾಯ ಅಧಿಕಾರಿಗಳು ತಿರಸ್ಕರಿಸಿದ್ದರು ಎನ್ನಲಾಗಿದೆ.
ಈ ನಡುವೆ ಬೆಳ್ತಂಗಡಿ ತಾಲೂಕಿನ ಅಶೋಕ್ ಆಚಾರ್ಯ ಅವರು ವೃದ್ಧ ದಂಪತಿಯನ್ನು ಒಕ್ಕಲೆಬ್ಬಿಸುವ ಸಲುವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ ಕಾರಣದಿಂದಾಗಿ ನ್ಯಾಯಾಲಯದ ಆದೇಶದಂತೆ ಅವರ ಗುಡಿಸಲನ್ನು ತೆರವುಗೊಳಿಸಲು ಕಂದಾಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಸ್ಥಳೀಯ ಗ್ರಾಮಕರಣಿಕರು ಅವರ ಮನೆಗೆ ಬಂದು ಮೌಖೀಕವಾಗಿ ತಿಳಿಸಿ, ಮನೆಯನ್ನು ತೆರವು ಮಾಡುವಂತೆ ನೋಟಿಸ್ ಹಚ್ಚಿ ಹೋಗಿದ್ದಾರೆ ಎನ್ನಲಾಗಿದೆ.
ಮಗಳ ಹೆಸರಿಗೆ ನೋಟಿಸ್
ದಂಪತಿಗೆ ನೀಡಲಾದ ನೋಟಿಸ್ ಈಗಾಗಲೇ ಮದುವೆ ಮಾಡಿಕೊಟ್ಟ ಮಗಳ ಹೆಸರಲ್ಲಿದೆ. ಅವರಿಗೂ ಇವರು ಪ್ರಸ್ತುತ ವಾಸವಿರುವ ಮನೆಗೂ ದಾಖಲೆಗಳ ಪ್ರಕಾರ ಯಾವುದೇ ಸಂಬಂಧ ಇಲ್ಲ ಎನ್ನಲಾಗಿದೆ. ಈ ವೃದ್ಧ ದಂಪತಿಯ ಬಳಿ ಆಧಾರ್, ರೇಷನ್ ಕಾರ್ಡ್, ಮತದಾನದ ಗುರುತಿನ ಚೀಟಿ ಸೇರಿದಂತೆ ಎಲ್ಲ ದಾಖಲೆಗಳೂ ಇವೆ. ನೀಡಿರುವ ನೋಟಿಸ್ ಪ್ರಕಾರ ಆ ಜಾಗವನ್ನು ಬಿಟ್ಟು ಅವರು ತೆರಳಬೇಕು ಎಂಬುದಾಗಿಯೂ ತಾಕೀತು ಮಾಡಲಾಗಿದೆ. ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ಯಾವುದೇ ಪಂಚಾಯತ್ ಸೌಲಭ್ಯಗಳು ಈ ಹಿರಿಜೀವಗಳ ಕುಟುಂಬಕ್ಕೆ ಲಭ್ಯವಾಗಿಲ್ಲ. ಅವರಿಗೆ ಬೇರೆ ಯಾವುದೇ ಆಸ್ತಿಗಳಾಗಲೀ, ಆಶ್ರಯವಾಗಲೀ ಇಲ್ಲ ಎನ್ನಲಾಗಿದೆ. ಮನೆಯ ಬಾಗಿಲಿಗೆ ನೊಟೀಸ್ ಹಚ್ಚಿದ ಬಳಿಕ ದಿಕ್ಕು ತೋಚದಂತಾಗಿರುವ ಅವರು ಕಡಬ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ದಯಾಮರಣಕ್ಕಾಗಿ ಮನವಿ ಮಾಡಿದ್ದು, ನಮ್ಮನ್ನು ಒಂದಾ ಆ ಸರಕಾರಿ ಜಾಗದಲ್ಲಿ ತಾವು ನಿರ್ಮಿಸಿರುವ ಸಣ್ಣ ಗುಡಿಸಲಿನಲ್ಲಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಿ. ಸಾಧ್ಯವಿಲ್ಲ ಎಂದಾದರೆ ದಯಮಾಡಿ ವೃದ್ಧರಾದ ನಮಗೆ ದಯಾಮರಣ ಅಥವಾ ಇನ್ಯಾವುದೇ ರೀತಿಯಲ್ಲಿ ಒಳ್ಳೆಯ ಮರಣಕ್ಕೆ ಅವಕಾಶವನ್ನು ನೀಡಬೇಕು ಎಂದು ಕೋರಿದ್ದಾರೆ.