ಬಾಹುಬಲಿಗೆ ಮಹಾಮಜ್ಜನ: ಇಂದಿನಿಂದ ಶತಮಾನದ 3ನೇ ಮಹಾಮಸ್ತಕಾಭಿಷೇಕ

ಶೇರ್ ಮಾಡಿ

ತ್ಯಾಗ ಸಂದೇಶ ದಿಂದ ಜಗದ್ವಿಖ್ಯಾತಿ ಹೊಂದಿ ಪಥದರ್ಶಕನಾದ ಭಗವಾನ್‌ ಬಾಹುಬಲಿ ಸ್ವಾಮಿಗೆ ವೇಣೂರಿನಲ್ಲಿ ಗುರುವಾರ ಈ ಶತಮಾನದ ಮೂರನೇ ಮಹಾಮಜ್ಜನ ಆರಂಭವಾಗಲಿದೆ. 12 ವರ್ಷಗಳ ಬಳಿಕ ನಡೆಯಲಿರುವ ಈ ಮಹೋತ್ಸವಕ್ಕೆ ಜಿನಭಕ್ತರು, ಜನರು ಕಾತರರಾಗಿದ್ದಾರೆ. ಪಶ್ಚಿಮ ಘಟ್ಟದ ಪದತಲದಲ್ಲಿರುವ ವೇಣೂರು ಎಂಬ ಪುಟ್ಟ ಪಟ್ಟಣ ತ್ಯಾಗಮೂರುತಿಯ ಮಹಾ ಮಸ್ತಕಾಭಿಷೇಕಕ್ಕೆ ಸಿದ್ಧವಾಗಿದೆ.

ಕ್ರಿ.ಶ. 1604ರಲ್ಲಿ 35 ಅಡಿ ಎತ್ತರದ ಏಕಶಿಲಾ ಬಾಹು ಬಲಿ ಮೂರ್ತಿಯನ್ನು ಅಜಿಲ ಅರಸರಾದ ತಿಮ್ಮಣ್ಣಾಜಿಲರು ಪ್ರತಿಷ್ಠಾಪಿಸಿ ಪ್ರಥಮ ಮಹಾ ಮಸ್ತಕಾಭಿಷೇಕ ನೆರವೇರಿಸಿದ್ದರು. ಆ ಬಳಿಕ ದಾಖಲೆಗಳಂತೆ 1928, 1956 ರಲ್ಲಿ ಮಹಾ ಮಜ್ಜನ ನೆರವೇರಿತ್ತು. 21ನೇ ಶತಮಾನದಲ್ಲಿ 2000, 2012ರಲ್ಲಿ ಜರಗಿ ಈಗ ಈ ಶತಮಾನದ 3ನೇ ಮಹಾಮಸ್ತಕಾಭಿಷೇಕ ನಡೆಯಲಿದೆ. 12 ವರುಷಗಳ ತರುವಾಯ ನಡೆಯುವ ಈ ಮಹಾಮಜ್ಜನಕ್ಕೆ ದೇಶ ವಿದೇಶಗಳಿಂದ ಭಕ್ತರು ಆಗಮಿಸಿ ಸೇವೆಯನ್ನು ಸಮರ್ಪಿಸಲಿದ್ದಾರೆ.

ವೇಣೂರು ಗ್ರಾಮದ ಫಲ್ಗುಣೀ ನದಿ ತೀರದಲ್ಲಿ ಉತ್ತರಾಭಿಮುಖವಾಗಿ ನಿಂತಿರುವ 35 ಅಡಿ ಎತ್ತರದ ಏಕಶಿಲಾ ರಚನೆಯ ಬಾಹುಬಲಿ ಮೂರ್ತಿಯ ಮಜ್ಜನಕ್ಕೆ ವೇಣೂರು ಸಿದ್ಧಗೊಂಡಿದೆ. ಬಾಹುಬಲಿ ಮೂರ್ತಿ ಪ್ರತಿಷ್ಠಾಪಿಸಿದ ಅಜಿಲ ವಂಶದ ಇಂದಿನ ಅರಸರಾದ ತಿಮ್ಮಣ್ಣರಸ ಡಾ| ಪದ್ಮಪ್ರಸಾದ್‌ ಅಜಿಲರು ಈ ಕ್ಷೇತ್ರದ ಎಲ್ಲ ಕೆಲಸ ಕಾರ್ಯಗಳಲ್ಲಿ ಸಕ್ರಿಯ ಮಾರ್ಗದರ್ಶನ ನೀಡುತ್ತ ಬಂದಿದ್ದು, ಅವರಿಗೆ ಪಟ್ಟಾಭಿಷೇಕವಾದ ಬಳಿಕ ಇದು ತೃತೀಯ ಮಸ್ತಕಾಭಿಷೇಕ.

Leave a Reply

error: Content is protected !!