ಕನ್ನಡ ಹೆಸರಾಂತ ನಟ, ಐಎಎಸ್ ಅಧಿಕಾರಿ ಕೆ.ಶಿವರಾಜ್ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಅವರಿಗೆ ನಿನ್ನೆಯಷ್ಟೇ ಹೃದಯಾಘಾತವಾಗಿತ್ತು. ಜೊತೆಗೆ ಮೆದುಳು ನಿಷ್ಕ್ರೀಯಗೊಂಡಿತ್ತು ಎಂದು ಹೇಳಲಾಗಿತ್ತು. ‘ಬಾ ನಲ್ಲೆ ಮಧುಚಂದ್ರಕೆ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿರುವ ಕೆ.ಶಿವರಾಮ್ ಕನ್ನಡದಲ್ಲಿ ಐಎಎಸ್ ಪಾಸು ಮಾಡಿ ಉತ್ತಮ ಅಧಿಕಾರಿ ಎನಿಸಿಕೊಂಡಿದ್ದರು.
ನಿನ್ನೆಯಷ್ಟೇ ಶಿವರಾಮ್ ಅನಾರೋಗ್ಯದಿಂದಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು, ಅಳಿಯ ಪ್ರದೀಪ್ ನಿನ್ನೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು. ಅವರ ಕಂಡೀಷನ್ ಕ್ರಿಟಿಕಲ್ ಆಗಿದೆ ಎಂದಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಕನ್ನಡದಲ್ಲೇ ಐಎಎಸ್ ಬರೆದು, ನಂತರ ಬೆಂಗಳೂರು, ವಿಜಯಪುರ, ಕೊಪ್ಪಳ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ನಂತರ ‘ಬಾ ನಲ್ಲೆ ಮಧುಚಂದ್ರಕೆ’, ವಸಂತ ಕಾವ್ಯದಂತಹ ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. ಸಾಂಗ್ಲಿಯಾನ 3 ಚಿತ್ರದಲ್ಲಿ ಇವರದ್ದು ಖಳನಾಯಕನ ಪಾತ್ರ. ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶಿವರಾಮ್, ತಮ್ಮ ಮಗಳನ್ನು ನಟ ಪ್ರದೀಪ್ ಅವರಿಗೆ ಧಾರೆಯರೆದಿದ್ದರು.
ರವೀಂದ್ರ ಕಲಾಕ್ಷೇತ್ರದಲ್ಲಿ ನಾಳೆ ಕೆ.ಶಿವರಾಮ್ ಅಂತಿಮ ದರ್ಶನ
ಕೆ ಶಿವರಾಮ್ 1953ರ ಏಪ್ರಿಲ್ 6ರಂದು ರಾಮನಗರ ಜಿಲ್ಲೆಯ ಉರಗಳ್ಳಿಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹಳ್ಳಿಯಲ್ಲಿ ಮುಗಿಸಿದ ಇವರು, ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದರು. ವಿವಿ ಪುರಂನ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಡಿಗ್ರಿ ಮುಗಿದ ಶಿವರಾಮ್, ನಂತರ 1982ರಲ್ಲಿ ಮೈಸೂರು ಯುನಿವರ್ಸಿಟಿಯಿಂದ ಇತಿಹಾಸ ವಿಷಯದಲ್ಲಿ ಮಾಸ್ಟರ್ ಆಫ್ ಆಟ್ಸ್ ಪದವಿ ಪಡೆದರು. 1985ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದರು. ನಂತರ ಕನ್ನಡ ಭಾಷೆಯಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಸಿನಿಮಾರಂಗ
1993ರಲ್ಲಿ ತೆರೆಕಂಡ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಮೂಲಕ ಕೆ ಶಿವರಾಮ್ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ವಸಂತಕಾವ್ಯ, ಸಾಂಗ್ಲಿಯಾನ ಪಾರ್ಟ್ ೩, ಪ್ರತಿಭಟನೆ, ಖಳನಾಯಕ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್, ನಾಗ, ಓ ಪ್ರೇಮ ದೇವತೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರು.
ರಾಜಕೀಯ ಜೀವನ
2013ರಲ್ಲಿ ನಿವೃತ್ತಿಯ ನಂತರ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದರು. 2014ರಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತರು. ನಂತರ ಅದೇ ವರ್ಷ ದಲಿತರಿಗೆ ಸಿ.ಎಂ ಪಟ್ಟ ಸಿಗಬೇಕೆಂದು ಪರಮೇಶ್ವರ್ ಬೆಂಬಲಿಸಿ ಕಾಂಗ್ರೆಸ್ ಸೇರಿದರು. ಆದರೆ ಕಾಂಗ್ರೆಸ್ನಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಬಿಜೆಪಿ ಸೇರಿದರು. ಛಲವಾದಿ ಮಹಸಭಾದ ಅಧ್ಯಕ್ಷರಾಗಿದ್ದರು. ಕೆ.ಶಿವರಾಮ್ ದಲಿತ ಪರ ಹೋರಾಟಕ್ಕೆ ಹೆಸರುವಾಸಿಯಾಗಿದ್ದಾರೆ.