ಚಾರ್ಮಾಡಿಯಲ್ಲಿ ಒಂಟಿ ಸಲಗ; ಅರಣ್ಯ ಇಲಾಖೆಯಿಂದ 3 ತಾಸು ಕಾರ್ಯಾಚರಣೆ

ಶೇರ್ ಮಾಡಿ

ಬೆಳ್ತಂಗಡಿ: ಸುಮಾರು ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಒಂಟಿ ಸಲಗ ಬುಧವಾರ ಬೆಳಗ್ಗೆ ಚಾರ್ಮಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹೊಸಮಠ ಪ್ರದೇಶದಲ್ಲಿ ಕಂಡುಬಂದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತು.

ಮಂಗಳವಾರ ರಾತ್ರಿ ಕೋಡಿಹಿತ್ತಿಲು ಬಾಬುಗೌಡರ ತೋಟಕ್ಕೆ ಕಾಡಾನೆ ನುಗ್ಗಿ 10 ಕ್ಕಿಂತ ಅಧಿಕ ಅಡಕೆ ಮರಗಳನ್ನು ನಾಶ ಮಾಡಿತ್ತು. ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಗಸ್ತು ವಾಹನದ ಸಿಬಂದಿ ಸ್ಥಳೀಯರ ಸಹಕಾರದಲ್ಲಿ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟಿದ್ದರು. ಅಲ್ಲಿಂದ ಹೊಸಮಠ ಪ್ರಕಾಶ್‌ ಅವರ ರಬ್ಬರ್‌ ತೋಟದಲ್ಲಿ ಮುಂಜಾನೆ ಕಂಡು ಬಂದಿದೆ. ರಬ್ಬರ್‌ ಟ್ಯಾಪಿಂಗ್‌ಗೆ ತೆರಳಿದ ಮಂದಿ ತೋಟದಲ್ಲಿದ್ದ ಕಾಡಾನೆಯನ್ನು ಕಂಡು ಭಯಭೀತರಾದರು.

ಮೆಣಸಿನ ಹೊಗೆ, ಗಾಳಿಯಲ್ಲಿ ಗುಂಡು
ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕಾಗಮಿಸಿ ಪಟಾಕಿ ಸಿಡಿಸಿದರು. ಬಳಿಕ ಮೆಣಸಿನ ಹೊಗೆ ಪ್ರಯೋಗಿಸಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸುಮಾರು 3 ತಾಸಿಗಿಂತ ಅಧಿಕ ಸಮಯ ಕಾರ್ಯಾಚರಣೆ ನಡೆಸಿ ಆನೆಯನ್ನು ಕಾಡಿಗಟ್ಟಿದರು. ಕಾಡಾನೆ ಚಾರ್ಮಾಡಿಯ ಪರ್ಲಾಣಿ ರಸ್ತೆ ಮೂಲಕ ಆಗಮಿಸಿ ಸೋಲಾರ್‌ ಬೇಲಿ ಇಲ್ಲದ ಭಾಗದಿಂದ ತೋಟಕ್ಕೆ ನುಗ್ಗಿದೆ. ಇದರಿಂದ ಸಿಬಂದಿಯ ಕಾರ್ಯಾಚರಣೆಗೆ ಅಡ್ಡಿಯಾಯಿತು.
ಆರ್‌ಎಫ್‌ಒ ಮೋಹನ್‌ ಕುಮಾರ್‌ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯ ಅ ಕಾರಿ ರವೀಂದ್ರ ಅಂಕಲಗಿ, ಗಸ್ತು ಅರಣ್ಯ ಪಾಲಕ ರವಿ, ಅರಣ್ಯ ವೀಕ್ಷಕರಾದ ಗೋಪಾಲ, ಕಿಟ್ಟ, ರಮೇಶ, ಇಲಾಖೆಯ ಚಾಲಕ ಕುಶಾಲಪ್ಪ ಗೌಡ, ವಸಂತ ಸೇರಿದಂತೆ ಸ್ಥಳೀಯರಾದ ಮಣಿ, ಆನಂದ, ಪ್ರಕಾಶ್‌, ಬಿಜು, ಕೃಷ್ಣಪ್ಪ, ವಿನೋದ್‌, ಪ್ರಮೋದ್‌, ಅವಿನಾಶ್‌, ರವಿಚಂದ್ರನ್‌, ಸುಧಾಕರ, ಶಶಿ ಸಹಕರಿಸಿದರು.

ನಿಯಂತ್ರಣ ಅಸಾಧ್ಯ
ನೆರಿಯದಲ್ಲಿ ವಾಹನದ ಮೇಲೆ ದಾಳಿ ನಡೆಸಿದ ಬಳಿಕ ಪರಿಸರದಲ್ಲಿ ಒಂಟಿ ಸಲಗದ ಪತ್ತೆ ಇರಲಿಲ್ಲ. ಬೇಸಗೆ ಬರುತ್ತಿದ್ದಂತೆ ಆಹಾರ, ನೀರನ್ನು ಅರಸಿ ಕಾಡಾನೆ ಮತ್ತೆ ನಾಡಿಗೆ ಇಳಿದಿರಬಹುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

Leave a Reply

error: Content is protected !!