ಕಂದಾಯ ದಾಖಲೆ ಮನೆಬಾಗಿಲಿಗೆ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗೆ ಅಗತ್ಯ ನಿರ್ದೇಶನ ನೀಡಲಾಗಿದೆ. ದಾಖಲೆಗಳ ಮುದ್ರಣ ಕಾರ್ಯ ಪ್ರಗತಿಯಲ್ಲಿದೆ.
ಡಾ| ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ,ದಕ್ಷಿಣ ಕನ್ನಡ
ನೇಸರ ಫೆ.10: ರಾಜ್ಯ ಸರಕಾರದ ಕಂದಾಯ ದಾಖಲೆ ಮನೆಬಾಗಿಲಿಗೆ ಯೋಜನೆ ಜಾರಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸರ್ವಸಿದ್ಧತೆಗಳು ನಡೆದಿವೆ. ದ.ಕ.ಜಿಲ್ಲೆಯ ಒಟ್ಟು 8 ತಾಲೂಕುಗಳಲ್ಲಿ 8,79,118 ಆರ್‌ಟಿಸಿಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಗುರಿ ಹೊಂದಲಾಗಿದೆ.ಯೋಜನೆ ಫೆ.10 ರಿಂದ ರಾಜ್ಯಾದ್ಯಂತ ಜಾರಿಗೆ ಬರುವ ಬಗ್ಗೆ ನಿಗದಿಯಾಗಿತ್ತಾದರೂ ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದ್ದು, ಹೊಸ ದಿನಾಂಕವನ್ನು ಕಂದಾಯ ಸಚಿವರು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಜಾಗದ ಪಹಣಿ (ಆರ್‌ಟಿಸಿ), ಹಿಸ್ಸಾ ನಕ್ಷೆ, ಆದಾಯ ಪ್ರಮಾಣಪತ್ರ ಹಾಗೂ ಜಾತಿ ಪ್ರಮಾಣಪತ್ರವನ್ನು ಮುದ್ರಿಸಿ ಪ್ರತಿ ರೈತರ ಮನೆಬಾಗಿಲಿಗೆ ಸರಬರಾಜು ಮಾಡಲಾಗುತ್ತದೆ. ದ.ಕ. ಜಿಲ್ಲೆಗೆ ಸಂಬಂಧಿಸಿದಂತೆ ಇ-ಟೆಂಡರು ಕರೆದು ಕಾರ್ಯಾದೇಶ ನೀಡಲಾಗಿದ್ದು ಮುದ್ರಣ ಕಾರ್ಯ ಪ್ರಗತಿಯಲ್ಲಿದೆ. ಫೆ. 10 ರೊಳಗೆ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದೆ.ದಾಖಲೆಗಳನ್ನು ಪ್ರತೀ ರೈತರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಗ್ರಾಮವಾರು ಕಂದಾಯ ದಾಖಲೆಗಳ ವಿವರಗಳನ್ನು ಜಿಲ್ಲಾ ಭೂಮಿ ಸಮಾಲೋಚಕರಿಗೆ ಈಗಾಗಲೇ ಹಂಚಿಕೆ ಮಾಡಲಾಗಿದೆ. ಫೆ.10ರಂದು ಈ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರಕಿದ ಬಳಿಕ ಗ್ರಾಮ ಮಟ್ಟದಲ್ಲಿ ಈ ಎಲ್ಲ ದಾಖಲೆಗಳನ್ನು ಒಂದು ಲಕೋಟೆಯಲ್ಲಿ ಹಾಕಿ ರೈತರ ಮನೆಬಾಗಿಲಿಗೆ ತಲುಪಿಸುವ ಕಾರ್ಯ ನಡೆಯಲಿದೆ.ರೈತರಿಗೆ ನೀಡಿದ ಬಳಿಕ ಅವರಿಂದ ಸ್ವೀಕೃತಿ ಪಡೆದು ಗ್ರಾಮವಾರು ವಹಿಯನ್ನು ನಿರ್ವಹಿಸಲಾಗುತ್ತದೆ.
ನೋಡಲ್ ಅಧಿಕಾರಿಗಳ ನೇಮಕ:
ದಾಖಲೆಗಳನ್ನು ಸಮರ್ಪಕವಾಗಿ ವಿತರಿಸಲು ಹಾಗೂ ಯೋಜನೆಯನ್ನು ಪೂರ್ಣಪ್ರಮಾಣದಲ್ಲಿ ಯಶಸ್ವಿಗೊಳಿಸಲು ಜಿಲ್ಲಾ ಹಾಗೂ ಉಪವಿಭಾಗ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಅಪರ ಜಿಲ್ಲಾಧಿಕಾರಿಯವರು ಹಾಗೂ ಉಪವಿಭಾಗ ಮಟ್ಟದಲ್ಲಿ ಉಪವಿಭಾಗಾಧಿಕಾರಿಯವರು ನೋಡಲ್ ಅಧಿಕಾರಿಯಾಗಿರುತ್ತಾರೆ. ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಮುಖ್ಯಸ್ಥರಾಗಿರುತ್ತಾರೆ. ಹೋಬಳಿ ವ್ಯಾಪ್ತಿಯಲ್ಲಿ ತಾಲೂಕು ಆರ್‌ಟಿಸಿ ಶಿರಸ್ತೇದಾರರು, ಭೂದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ನಾಡಕಚೇರಿ ಉಪತಹಶೀಲ್ದಾರರು, ಹೋಬಳಿಯಲ್ಲಿ ಕಂದಾಯ ನಿರೀಕ್ಷಕರು ಹಾಗೂ ಗ್ರಾಮದ ಗ್ರಾಮಲೆಕ್ಕಿಗರು ರೈತರ ಮನೆಬಾಗಿಲಿಗೆ ತಲುಪಿಸುವ ಕಾರ್ಯದ ತಂಡದ ಉಸ್ತುವಾರಿಗಳಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ :
ಉಡುಪಿ ಜಿಲ್ಲೆಯ ಎಲ್ಲ ಗ್ರಾ.ಪಂ. ಮೂಲಕ ಆರ್‌ಟಿಸಿ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಹಾಗೂ ಭೂ ನಕ್ಷೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಮುದ್ರಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
ಆಯಾ ಗ್ರಾ.ಪಂ. ಮೂಲಕ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದೆ. ಅದರ ಆಧಾರದಲ್ಲಿ 6,61,230 ಆರ್‌ಟಿಸಿ, 13,10,481 ಜಾತಿ ಪ್ರಮಾಣ ಪತ್ರ, 8,01,851 ಆದಾಯ ಪ್ರಮಾಣ ಪತ್ರ ಹಾಗೂ 4,62,861 ಭೂ ನಕ್ಷೆಯನ್ನು ಜಿಲ್ಲೆಯಲ್ಲಿ ಮನೆ ಬಾಗಿಲಿಗೆ ಸರಕಾರದ ದಾಖಲೆಯಡಿ ವಿತರಣೆ ಮಾಡಲಾಗುತ್ತದೆ.
—ಜಾಹೀರಾತು—