ನೇಸರ ಫೆ.10: ಕಾರಾಗೃಹ ಸೇರಿದ ಮೇಲೆ ಬದುಕು ಮುಗಿಯಿತು ಅಂದುಕೊಳ್ಳುವ ಕೈದಿಗಳಲ್ಲಿ ಭರವಸೆ ಮೂಡಿಸುವುದರೊಂದಿಗೆ ಅವರ ಹೊಸ ಬದುಕಿಗೆ ಸ್ವಾವಲಂಬನೆಯ ಹಾದಿ ತೋರಿಸುವ ಕಾರ್ಯವನ್ನು ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಆರಂಭಿಸಲಾಗಿದೆ.
ಕೈದಿಗಳ ಕೈಯಲ್ಲೇ ಗಿಡಗಳನ್ನು ಬೆಳೆಸುವ, ಕರಕುಶಲ ವಸ್ತುಗಳನ್ನು ಸಿದ್ಧಪಡಿಸುವ ಚಟುವಟಿಕೆ ಆರಂಭಿಸಲಾಗಿದೆ. ಕಾರಾಗೃಹದ ಆವರಣದೊಳಗೆ ಸಸಿಗಳು ನಳನಳಿಸಲು ಆರಂಭಗೊಂಡಿವೆ. ಸುಂದರ ಹಾರಗಳು ಸಿದ್ಧಗೊಂಡಿವೆ. ನರ್ಸರಿಯಲ್ಲಿ ಹೂವಿನ ಸುಮಾರು 2,500 ಗಿಡಗಳನ್ನು ಬೆಳೆಸಲಾಗುತ್ತಿದೆ. ಜತೆಗೆ ಅಡಿಕೆ ಸಸಿ ಬೆಳೆಸಲು ತಯಾರಿ ನಡೆದಿದೆ. ನರ್ಸರಿ ತರಬೇತಿಗೆ 25ರಿಂದ 45 ವರ್ಷ ವಯೋಮಾನದ ಸುಮಾರು 20 ವಿಚಾರಣಾಧೀನ ಕೈದಿಗಳು ಆಸಕ್ತಿ ತೋರಿಸಿದ್ದಾರೆ. ಬಟ್ಟೆಯ ಅಲಂಕಾರಿಕ ಹೂವಿನ ತಯಾರಿಕೆಯಲ್ಲಿ 5 ಮಹಿಳೆಯರು, 7 ಪುರುಷರು ಸಹಿತ 12 ಮಂದಿ ತೊಡಗಿಸಿ ಕೊಂಡಿದ್ದಾರೆ. ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಸುಮಾರು 8 ಮಂದಿ ಸಹಿತ ಈಗಾಗಲೇ ವಿವಿಧ ಕೌಶಲಭಿವೃದ್ಧಿ ಚಟುವಟಿಕೆಗಳಲ್ಲಿ 40ಕ್ಕೂ ಅಧಿಕ ಮಂದಿ ವಿಚಾರಣಾಧೀನ ಕೈದಿಗಳು ತೊಡಗಿಸಿ ಕೊಂಡಿದ್ದಾರೆ. ಸುಮಾರು 50 ವಿಧದ ಕರಕುಶಲ ವಸ್ತುಗಳ ತಯಾರಿ ಬಗ್ಗೆ ತರಬೇತಿ ನೀಡುವ ಪ್ರಕ್ರಿಯೆ ಆರಂಭವಾಗಿದೆ.
ಮಾರಾಟ ಕೇಂದ್ರ ತೆರೆಯಲು ಚಿಂತನೆ. ಕೈದಿಗಳಿಂದ ಸಿದ್ಧಗೊಳ್ಳುವ ಸಸಿಗಳು, ಹಾರಗಳು, ಕರಕುಶಲ ವಸ್ತುಗಳನ್ನು ಕಾರಾಗೃಹದ ಸಮೀಪವೇ ಮಾರಾಟ ಮಾಡುವ ಚಿಂತನೆ ಕಾರಾಗೃಹ ಇಲಾಖೆಯ ಅಧಿಕಾರಿಗಳದ್ದು. ಇದರಿಂದ ಬರುವ ಆದಾಯದಿಂದ ಕೆಲಸ ಮಾಡಿದ ಕೈದಿಗಳಿಗೆ ವೇತನ, ಲಾಭಾಂಶ ನಿಗದಿಪಡಿಸುವ ಬಗ್ಗೆಯೂ ಇಲಾಖೆಯಿಂದ ಅನುಮತಿ ಪಡೆದು ತೀರ್ಮಾನಿಸಲಾಗುವುದು ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಇರುವುದರಿಂದ ಕಡಿಮೆ ಅವಧಿಯಲ್ಲಿ ಕಲಿತುಕೊಳ್ಳಬಹುದಾದ ಕೌಶಲಗಳನ್ನು ತಿಳಿಸಿಕೊಡಲಾಗುತ್ತಿದೆ. ಇಲ್ಲಿ ತರಬೇತಿ ಪಡೆದುಕೊಂಡ ಅನಂತರ ಬಿಡುಗಡೆಯಾಗಿ ಮನೆಗೆ ಹೋದಾಗ ಅಲ್ಲಿ ಅವರಾಗಿಯೇ ನರ್ಸರಿ ಬೆಳೆಸುವ ಅಥವಾ ಕರಕುಶಲ ವಸ್ತುಗಳ ತಯಾರಿಕೆ ಯ ಉದ್ಯೋಗ ಮಾಡಿ ಅದನ್ನು ಮಾರಾಟ ಮಾಡಬಹುದಾಗಿದೆ. ಕಾರಾಗೃಹದಲ್ಲಿ ತರಬೇತಿ ನೀಡಿದ ಸಂಸ್ಥೆಯವರೇ ಕರಕುಶಲ ವಸ್ತುಗಳನ್ನು ಖರೀದಿಸಲು ಸಿದ್ಧರಿರುತ್ತಾರೆ. ಕೈದಿಗಳಲ್ಲಿ ಹೆಚ್ಚಿನವರು ಚುರುಕಾಗಿದ್ದಾರೆ. ಅವರಿಗೂ ಏಕತಾನತೆಯಿಂದ ಹೊರಬಂದು ಕ್ರಿಯಾಶೀಲರಾಗಲು ಮನಸಿದೆ. ಜತೆಗೆ ಭವಿಷ್ಯದಲ್ಲಿ ಸ್ವಾವಲಂಬಿ ಗಳಾಗ ಬೇಕು, ಸಮಾಜದಿಂದ ತಿರಸ್ಕಾರಗೊಳ್ಳಬಾರದೆಂಬ ಆಸೆಯಿದೆ. ಅಂತೆಯೇ ಹೆಚ್ಚಿನವರು ಬೇಗನೆ ಕೌಶಲ ಕಲಿಯುತ್ತಿದ್ದಾರೆ ಎಂದು ಕಾರಾಗೃಹ ಅಧೀಕ್ಷಕ ಓಬಳೇಶಪ್ಪ ತಿಳಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬಟ್ಟೆಯ ಹಾರ ತಯಾರಿಕೆಗೆ ಎಸ್‌ಕೆಡಿಆರ್‌ಡಿಪಿಯವರಿ, 15 ದಿನಗಳ ಹಿಂದೆ 12 ಮಂದಿ ಕೈದಿಗಳು ಒಂದೇ ದಿನದ ತರಬೇತಿ ಪಡೆದು ಇದುವರೆಗೆ 107 ಹಾರಗಳನ್ನು ತಯಾರಿಸಿದ್ದಾರೆ. ಕರಕುಶಲ ವಸ್ತುಗಳ ತಯಾರಿಕೆಗೆ ಕೆ.ನರೇಂದ್ರ ಶೆಣೈ, ನರ್ಸರಿ ಬಗ್ಗೆ ಜಗನ್ನಾಥ, ಶ್ರವಣ್ ಶೆಣೈ ಅವರು ತರಬೇತಿ ನೀಡುತ್ತಿದ್ದಾರೆ. ಜಿಲ್ಲಾ ಕಾರಾಗೃಹದಲ್ಲಿ ಪ್ರಸ್ತುತ 263 ಮಂದಿ ವಿಚಾರಣಾಧೀನ ಕೈದಿಗಳಿದ್ದಾರೆ.
ಬದುಕಿನ ಹಾದಿ ತೋರಿಸುವ ಪ್ರಯತ್ನ
ಕೇಂದ್ರ ಕಾರಾಗೃಹಗಳಲ್ಲಿ ಕೈದಿಗಳಿಗೆ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸಿ, ಆದಾಯಗಳಿಸಿ ಬದುಕಿನ ಬಗ್ಗೆ ಭರವಸೆ ಬೆಳೆಸಿಕೊಳ್ಳಲು ಅವಕಾಶ ಈಗಾಗಲೇ ಇದೆ. ಇದೇ ಮಾದರಿಯಲ್ಲಿ ಜಿಲ್ಲಾ ಕಾರಾಗೃಹದಲ್ಲಿಯೂ ಕೌಶಲಭಿವೃದ್ಧಿ ಸಹಿತವಾದ ವೃತ್ತಿ ತರಬೇತಿಯನ್ನು ಸರಕಾರದ ಆದೇಶದಂತೆ ಆರಂಭಿಸ ಲಾಗಿದ್ದು, ಈಗಾಗಲೇ 40ಕ್ಕೂ ಅಧಿಕ ಮಂದಿ ವಿಚಾರಣಾಧೀನ ಕೈದಿಗಳು ಸ್ವಯಂ ಆಸಕ್ತಿಯಿಂದ ಪಾಲ್ಗೊಂಡಿದ್ದಾರೆ. ಅವರು ಕಾರಾಗೃಹದಲ್ಲಿರುವಾಗ ಆದಾಯ ಗಳಿಸುವ ಜತೆಗೆ ಮುಂದೆ ಸಮಾಜದಲ್ಲಿ ಸ್ವಾವಲಂಬನೆಯ ಬದುಕು ಸಾಗಿಸಲೂ ಅವಕಾಶವಿದೆ ಎಂಬುದನ್ನು ತೋರಿಸಿಕೊಡುವ ಪ್ರಯತ್ನ.